ವರದಿ ಬೆನ್ನಲ್ಲೇ ತೆರವಾಯ್ತು ಹೆಬ್ಬಾಳ್ಕರ್ ಫೋಟೋ !
ಯುವ ಭಾರತ ಸುದ್ದಿ ಬೆಳಗಾವಿ :
ಯುವ ಭಾರತ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಲೇ ತುಮ್ಮರಗುದ್ದಿ ಗ್ರಾಮದಲ್ಲಿ ಹಾಕಲಾಗಿದ್ದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಫೋಟೋವನ್ನು ಕೊನೆಗೂ ತೆಗೆಯಲಾಗಿದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದೀಗ ತುಸು ಜೋರಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಬಿಗು ಚುನಾವಣೆ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಆದರೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಚುನಾವಣೆಯ ನೀತಿ ಸಂಹಿತೆ ಅನ್ವಯವಾಗುವುದಿಲ್ಲವೋ ಎಂಬ ಪ್ರಶ್ನೆ ಮೂಡಿತ್ತು.
ಯಾಕೆಂದರೆ
ಲೋಕೋಪಯೋಗಿ ಇಲಾಖೆ ವತಿಯಿಂದ ತುಮ್ಮರಗುದ್ದಿ ಗ್ರಾಮದಲ್ಲಿ ಕೈಗೊಂಡಿರುವ ಕಾಮಗಾರಿಯ ಒಟ್ಟು ಖರ್ಚು ವೆಚ್ಚ ಕುರಿತ ಬೃಹತ್ ಫಲಕ ಇನ್ನೂ ತೆರವುಗೊಳಿಸಿಲ್ಲ. ಈ ಫಲಕದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರ ದೊಡ್ಡದಾಗಿ ರಾರಾಜಿಸುತ್ತಿದೆ. ಇದನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದಕ್ಕೆ ಬಿಜೆಪಿ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಸಾರ್ವಜನಿಕ ರಸ್ತೆಯ ಸನಿಹದಲ್ಲೇ ಇಷ್ಟೊಂದು ದೊಡ್ಡ ಗಾತ್ರದ ಫಲಕ ಹಾಕಲಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಹಾಗೆಯೇ ಉಳಿಸಿಕೊಳ್ಳಲಾಗಿದೆಯೋ ಎನ್ನುವುದು ಬಿಜೆಪಿ ಕಾರ್ಯಕರ್ತರ ಪ್ರಶ್ನೆಯಾಗಿತ್ತು. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ತಕ್ಷಣ ಗಮನಹರಿಸಬೇಕು ಎಂದು ಪತ್ರಿಕೆ ವರದಿ ಮಾಡುತ್ತಲೇ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫೋಟೋವನ್ನು ಕೊನೆಗೂ ತೆಗೆಯಲಾಗಿದೆ.