ಶೆಟ್ಟರ್, ಸವದಿ ಪಕ್ಷ ಬಿಟ್ಟ ಬಗ್ಗೆ ಕೊನೆಗೂ ಸತ್ಯ ಬಯಲಿಗೆಳೆದ ಅಮಿತ್ ಶಾ !
ಬೆಂಗಳೂರು :
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಪಕ್ಷ ಬಿಟ್ಟ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ
ಘಟನೆಯ ಸಂಪೂರ್ಣ ವಿವರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಗಳಿಗೆ ವಿಶೇಷ ಸಂದರ್ಶನ ನೀಡಿದ ಅವರು, ಶೆಟ್ಟರ್ ಹಾಗೂ ಸವದಿ ಈ ಬಾರಿ ಹೀನಾಯ ಸೋಲು ಅನುಭವಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ವಿಚಾರದಲ್ಲಿ ಒಂದು ವಿಚಾರವನ್ನು ನಾನು ಸ್ಪಷ್ಟಪಡಿಸಲು ಬಯಸುವೆ. ಜಗದೀಶ ಶೆಟ್ಟರ್ ಅವರು ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಭಾಗಿಯಾಗಲ್ಲ ಎಂದು ನಿರ್ಧರಿಸಿದ್ದರು. ಹಾಗಿದ್ದರೆ ಶಾಸಕರಾಗಿ ಏನು ಮಾಡುತ್ತಾರೆ. ಅವರೇ ನಾವು ಸಚಿವರಾಗಲ್ಲ ಎಂದು ತೀರ್ಮಾನಿಸಿ ಸಾರ್ವಜನಿಕವಾಗಿ ಹೇಳಿದ್ದರು. ಹೀಗಾಗಿ ಅದು ನನ್ನ ಹಾಗೂ ಹೈಕಮಾಂಡ್ ನಿರ್ಧಾರ ಆಗಿರಲಿಲ್ಲ. ಇಷ್ಟು ವರ್ಷ ಬಿಜೆಪಿಯಿಂದ ಆಯ್ಕೆಯಾಗಿದ್ದ
ಅವರ ಜಾಗದಲ್ಲಿ ಹೊಸಬರು ಬರಬೇಡವೇ ಎಂದು ಹೇಳಿದರು.
ಲಕ್ಷ್ಮಣ ಸವದಿಯವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದೆವು. ಉಪಮುಖ್ಯಮಂತ್ರಿಯನ್ನಾಗಿಯೂ ಮಾಡಿದೆವು. ಅವರ ಪರಿಷತ್ ಸದಸ್ಯತ್ವ 2028 ರ ವರೆಗೂ ಇತ್ತು. ಹೀಗಿದ್ದರೂ ಬೇರೆಯವರಿಗೆ ಅವಕಾಶ ಸಿಗಬೇಕೇ ಬೇಡವೇ ? ಪರಿಷತ್ ಸದಸ್ಯರಾಗುವಾಗಲೇ ಸವದಿಯವರು ಈ ವಿಷಯವನ್ನು ಹೇಳಬೇಕಿತ್ತು, ನಾನು ಚುನಾವಣೆಗೆ ನಿಲ್ಲುತ್ತೇನೆ. ನನಗೆ ಪರಿಷತ್ ಸ್ಥಾನ ಬೇಡ ಅಂತ ಅಂದೇ ಹೇಳಬೇಕಿತ್ತು. ಎಲ್ಲಾ ಮುಗಿದು ಹೋದ ಮೇಲೆ ನಮಗೆ ಅನ್ಯಾಯ ಆಯಿತು ಎಂದು ಹೇಳುತ್ತಾರೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಶೆಟ್ಟರ್ ಅವರಿಗೆ ಪಕ್ಷ 6 ಸಲ ಶಾಸಕರನ್ನಾಗಿ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟಿದೆ. ಪ್ರತಿಪಕ್ಷ ನಾಯಕನ ಸ್ಥಾನವನ್ನು ನೀಡಿರಲಿಲ್ಲವೇ ? ಅವರಿಗೆ ಎಲ್ಲಿ ಅನ್ಯಾಯ ಆಗಿದೆ ಎಂದು ಪ್ರಶ್ನಿಸಿದರು.
ಇವರಿಬ್ಬರೂ ತಮ್ಮ ಜೀವನ ಪರ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದವರು. ಆದರೆ ಇದೀಗ ಕೇವಲ ಶಾಸಕ ಸ್ಥಾನಕ್ಕೆ ಆಸೆಪಟ್ಟು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರಿಬ್ಬರು ಸೋಲುವುದು ಖಚಿತ. ಹುಬ್ಬಳ್ಳಿ ಜನ ಬಿಜೆಪಿಗೆ ಮತ ನೀಡುತ್ತಾರೆಯೇ ಹೊರತು ವ್ಯಕ್ತಿಗಳನ್ನು ನೋಡಿ ಮತ ಹಾಕುವುದಿಲ್ಲ. ನಾನು ಗಾಂಧಿನಗರ ಕ್ಷೇತ್ರದಿಂದ ಗೆಲ್ಲುತ್ತೇನೆ ಎಂದರೆ ಮತದಾರರು ಕಮಲ ಚಿಹ್ನೆ ನೋಡಿ ಮತ ಹಾಕುತ್ತಾರೆಯೇ ಹೊರತು ನನಗೆ ಅಲ್ಲ. ಇದುವರೆಗೆ ಹುಬ್ಬಳ್ಳಿ ಮತದಾರರು ಶೆಟ್ಟರ್ ಅವರನ್ನು ನೋಡಿ ಮತ ಹಾಕಿದ್ದಲ್ಲ. ಪಕ್ಷವನ್ನು ನೋಡಿ ಮತ ಹಾಕಿದ್ದಾರೆ ಎಂದು ತಿವಿದರು.
ಜಗದೀಶ ಶೆಟ್ಟರ್ ಅವರಿಗೆ ಈ ಬಾರಿ ಸ್ಪರ್ಧಿಸಬೇಡಿ ಎಂದು ಪಕ್ಷದಿಂದ ಹೇಳಲಾಗಿತ್ತು. ನಂತರ ನಾನೇ ಸ್ವತಃ ಈ ಬಾರಿ ಸ್ಪರ್ಧೆ ಬೇಡ. ಯಡಿಯೂರಪ್ಪ ರೀತಿ ಪಕ್ಷದ ಕೆಲಸ ಮಾಡಿ ಎಂದು ಹೇಳಿದೆ. ಈಗಲೂ ಸಮಸ್ಯೆ ಏನಿಲ್ಲ, ಪಕ್ಷದಲ್ಲಿ ತುಂಬಾ ಜನಕ್ಕೆ ಟಿಕೆಟ್ ಕೊಟ್ಟಿಲ್ಲ. ಎಲ್ಲಿಯೂ ಸಮಸ್ಯೆಯಾಗಿಲ್ಲ ಎಂದು ಹೇಳಿದರು.
ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಇಬ್ಬರೂ ಮೂವತ್ತು ಸಾವಿರ ಅಂತರದಿಂದ ಸೋಲುತ್ತಾರೆ. ಹುಬ್ಬಳ್ಳಿಯ ಸಂಘಟನೆ ನನಗೆ 1990 ರಿಂದಲೂ ಗೊತ್ತಿದೆ. ಹುಬ್ಬಳ್ಳಿಯಲ್ಲಿ ವ್ಯಕ್ತಿಗೆ ವೋಟ್ ಕೊಡುವುದಿಲ್ಲ. ಪಾರ್ಟಿಗೆ ವೋಟ್ ಕೊಡುತ್ತಾರೆ. ಆದರೆ ಒಂದು ಸಲ ಟಿಕೆಟ್ ಕೊಡಲ್ಲ ಎಂದಿದ್ದಕ್ಕೆ ಸಿದ್ಧಾಂತವನ್ನು ಮರೆತು ಶೆಟ್ಟರ್ ಕಾಂಗ್ರೆಸಿಗೆ ಹೋದರು. ಬಿಜೆಪಿ ಕಾರ್ಯಕರ್ತ ಯಾವತ್ತಾದರೂ ಕಾಂಗ್ರೆಸ್ ಜೊತೆ ಹೋಗುವುದು ಸಾಧ್ಯವೇ ? ಸ್ವಾರ್ಥ ಇಲ್ಲ ಎಂದರೆ ಅವರು ಪಕ್ಷ ಬಿಡುತ್ತಿದ್ದರೆ ? ಜನ ಇದನ್ನೆಲ್ಲಾ ನೋಡುತ್ತಾರೆ ಎಂದು ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.