ಅಥಣಿಯಲ್ಲಿ ಕಾಂಗ್ರೆಸಿಗೆ ಮತ್ತೊಂದು ಬಿಗ್ ಶಾಕ್ : ಪಕ್ಷಕ್ಕೆ ವಿದಾಯ ಹೇಳಿದ ಕಟ್ಟಾ ಕಾಂಗ್ರೆಸ್ಸಿಗ !
ಯುವ ಭಾರತ ಸುದ್ದಿ ಅಥಣಿ :
ಅಥಣಿಯ ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕ, ಹಿರಿಯ ನ್ಯಾಯವಾದಿ ಹಾಗೂ ಕಟ್ಟಾ ಕಾಂಗ್ರೆಸ್ಸಿಗ ಸುನಿಲ್ ಸಂಕ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಅವರು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮತ್ತು ಚಿಕ್ಕೋಡಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೆ ಅವರಿಗೆ ಶನಿವಾರ ತಮ್ಮ ರಾಜೀನಾಮೆ ರವಾನಿಸಿದ್ದಾರೆ.
ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳುತ್ತಿದ್ದೇನೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಹಾ ರಾಜೀನಾಮೆ ನೀಡುತ್ತಿದ್ದೇನೆ, ಧನ್ಯವಾದಗಳು ಎಂಬ ಸಂದೇಶ ರವಾನಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುನಿಲ್ ಸಂಕ ಅವರು, ನಾವು ಮೊದಲಿನಿಂದಲೂ ಲಕ್ಷ್ಮಣ ಸವದಿ ಅವರೊಂದಿಗೆ
ನೇರಾನೇರ ರಾಜಕಾರಣ ಮಾಡಿಕೊಂಡು ಬಂದವರು. ಕಾಂಗ್ರೆಸ್ ಪಕ್ಷ ಅವರನ್ನು ಬರ ಮಾಡಿಕೊಂಡಿದೆ. ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವಾಗ ಕೆಲವೇ ಕೆಲವು ನಾಯಕರಿಗೆ ಮಾತ್ರ ಭರವಸೆ ನೀಡಿ ಅವರ ಪರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದೆ. ಆದರೆ ಇದೀಗ
ಲಕ್ಷ್ಮಣ ಸವದಿ ಅವರ ಪ್ರವೇಶದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದರೂ ಅವರನ್ನು ತಡೆಯುವ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ. ನಾನು ಸಹಾ ಈ ಬಾರಿ ಕಾಂಗ್ರೆಸ್ ಪಕ್ಷದ
ಅಭ್ಯರ್ಥಿಯ ಗೆಲುವಿನ ಸಲುವಾಗಿ ಒಂದೆರಡು ದಿನಗಳ ಕಾಲ ಪ್ರಚಾರಕ್ಕೆ ಹೋಗಿದ್ದೆ. ಸವದಿ ಅವರು ಪಕ್ಷ ಸೇರ್ಪಡೆಗೊಂಡ ನಂತರ ಕಾಂಗ್ರೆಸ್ಸಿಗರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಕೋರುತ್ತಿದ್ದರೂ ನನ್ನೊಂದಿಗೆ ಮಾತ್ರ ಅವರು ಸಂಪರ್ಕ ಸಾಧಿಸಲಿಲ್ಲ. ಚುನಾವಣೆ ಬರುತ್ತದೆ ಹೋಗುತ್ತದೆ, ಆದರೆ ನನಗೆ ಲಕ್ಷ್ಮಣ ಸವದಿ ಅವರ ಜೊತೆ ನೇರಾನೇರ ರಾಜಕಾರಣ ಕಾರಣ ಹೊರತುಪಡಿಸಿ ಬೇರೆ ಯಾವ ದ್ವೇಷವು ಇಲ್ಲ. ಈಗ ಅವರು ಕಾಂಗ್ರೆಸಿನಲ್ಲಿ ಇರುವಾಗ ನಮ್ಮ ರಾಜಕಾರಣ ಸರಿ ಆಗದು. ಇಷ್ಟಕ್ಕೂ ನನಗೆ ರಾಜಕೀಯವೇ ಅನಿವಾರ್ಯವಲ್ಲ. ಪಕ್ಷದ ಈಗಿನ ಬೆಳವಣಿಗೆ ಬೇಸರ ತಂದಿದೆ.
ಮೊದಲಿನಿಂದಲೂ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ನಾನು ಭಾರವಾದ ಮನಸ್ಸಿನಿಂದ ಪಕ್ಷ ತ್ಯಜಿಸುತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.
ಅಥಣಿಯಲ್ಲಿ 2019 ರಲ್ಲಿ ಮಹೇಶ ಕುಮಟಳ್ಳಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ ನಂತರ ಇಲ್ಲಿಂದ ಕಾಂಗ್ರೆಸ್ ಪರ ಯಾರೇ ಸ್ಪರ್ಧಿಸಿದ್ದರೂ ಗೆಲ್ಲುವ ವಾತಾವರಣ ನಿರ್ಮಾಣ ಮಾಡಿದ್ದೆವು. ಎಲ್ಲಾ ಕಾಂಗ್ರೆಸ್ಸಿಗರನ್ನು ಒಟ್ಟು ಸೇರಿಸಿ ಪಕ್ಷ ಕಟ್ಟುವ ಪ್ರಯತ್ನ ಮಾಡಿದ್ದೆವು. ಆದರೆ ಸವದಿ ಅವರು ಬಂದ ನಂತರ ವಾತಾವರಣವೇ ಬದಲಾಗಿದೆ ಎಂದು ಆರೋಪಿಸಿದರು.
ನಾನು ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳುತ್ತಲೇ ಬಿಜೆಪಿ, ಆಮ್ ಆದ್ಮಿ ಪಕ್ಷಗಳು ನನ್ನನ್ನು ಸಂಪರ್ಕಿಸಿವೆ. ಚುನಾವಣೆ ಹತ್ತಿರವಿದೆ. ಆದರೆ ಇದುವರೆಗೂ ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿಯತ್ತ ?
ಈ ನಡುವೆ ಸುನಿಲ್ ಸಂಕ ಅವರು ಕಳೆದ ಕೆಲ ದಿನಗಳಿಂದ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಮಾತು ಕೇಳಿ ಬಂದಿದ್ದು, ಬಹುತೇಕ ಕಮಲ ಮುಡಿಯುವುದು ಖಚಿತ ಎನ್ನಲಾಗುತ್ತಿದೆ.
ಕಳೆದ ವರ್ಷದ ಜೂನ್ 13 ರಂದು ನಡೆದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಸುನಿಲ್ ಸಂಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಅವರನ್ನು ಬಿಜೆಪಿಗೆ ಸೆಳೆಯುವಲ್ಲಿ ಹಿರಿಯ ಬಿಜೆಪಿ ನಾಯಕ ರಮೇಶ ಜಾರಕಿಹೊಳಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ತಮ್ಮ ಶಿಷ್ಯ ಮಹೇಶ ಕುಮಟಳ್ಳಿ ಅವರಿಗೆ ಗೆಲುವು ತಂದು ಕೊಡುವಲ್ಲಿ ಬಹು ಮುಖ್ಯ ಪಾತ್ರ ವಹಿಸಲಿದ್ದಾರೆ.
ಸುನಿಲ್ ಸಂಕ ಅವರು ಪ್ರಮುಖ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಅವರ ಕುಟುಂಬ ಮೂರು ತಲೆಮಾರುಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದೆ.
ಕೆಪಿಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿಯವರ ಆಪ್ತರಾಗಿರುವ ಸುನಿಲ್ ಸಂಕ ಪರಿಷತ್ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಗೆಲುವಿಗೆ ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲ ಶ್ರಮಿಸಿದ್ದರು. ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ಸಹೋದರ ಹನುಮಂತ ನಿರಾಣಿ ವಿರುದ್ಧ ಸೋಲು ಅನುಭವಿಸಿದ್ದರು.
ಹೊರ ನಡೆಯುತ್ತಿರುವ ಕಾಂಗ್ರೆಸ್ ನಾಯಕರು :
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪ್ರವೇಶಿಸಿದ ನಂತರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಿರಿಯ ಕಾಂಗ್ರೆಸ್ಸಿಗರು ಆಗಿರುವ ಕುರುಬ ಸಮುದಾಯದ ಸತ್ಯಪ್ಪ ಬಾಗೇನವರ ಹಾಗೂ ಪಂಚಮಸಾಲಿ ಸಮುದಾಯದ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಇದೀಗ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುನಿಲ್ ಸಂಕ ಸಹಾ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.