ವಿಧಾನಸಭೆ ಚುನಾವಣೆ 2023: ರಾಜ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತರ ತಂಡ ಭೇಟಿ

ಯುವ ಭಾರತ ಸುದ್ದಿ ಬೆಂಗಳೂರು:
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ ನೇತೃತ್ವದ ತಂಡ ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ವೀಕ್ಷಣೆಗಾಗಿ ಮಾರ್ಚ್ 9ರಂದು ಬೆಂಗಳೂರಿಗೆ ಆಗಮಿಸಲಿದೆ.
ಚುನಾವಣಾ ಆಯುಕ್ತರಾದ ಅನೂಪಚಂದ್ರ ಪಾಂಡೆ, ಅರುಣ್ ಗೋಯಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ನಿಯೋಗದಲ್ಲಿ ಇರುತ್ತಾರೆ.
9ರಂದು ಮಾರ್ಚ್ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಜೊತೆ ಸಭೆ ನಡೆಸಿದ ನಂತರ ರಾಜಕೀಯ ಪಕ್ಷಗಳೊಂದಿಗೆ ಮಹತ್ವದ ಸಭೆ ನಡೆಸಿ ಅವರಿಂದ ಸಲಹೆ, ಅಭಿಪ್ರಾಯ ಪಡೆಯಲಿದ್ದಾರೆ.
ಈ ಸಭೆಯನ್ನು ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ಕರೆಯಲಾಗಿದೆ ಎಂದು ಹೇಳಲಾಗಿದೆ.
ಸಂಜೆ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ ಹಮ್ಮಿಕೊಂಡಿರುವ ‘ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದು, ಇದರಲ್ಲಿ ಹಲವು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯುಕ್ತರು ನೇರವಾಗಿ ಹಾಗೂ ವಿಡಿಯೊ ಸಂವಾದದ ಮೂಲಕ ಪಾಲ್ಗೊಳ್ಳಲಿದ್ದಾರೆ.
ಮಾರ್ಚ್ 10 ರಂದು ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಪೂರ್ವಭಾವಿ ತಯಾರಿ ಕುರಿತು ಸಭೆ ನಡೆಯಲಿದೆ. ಸಂಜೆ ನಗರದ ಐಐಎಸ್‍ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ನಡೆಯುವ ಮತದಾರರ ಜಾಗೃತಿ ಹಾಗೂ ವಿಶೇಷ ಸಂವಾದದಲ್ಲಿ ಭಾಗವಹಿಸುವರು. ಮಾರ್ಚ್ 11ರಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
YuvaBharataha Latest Kannada News