ಉತ್ತರದಿಂದ ಸ್ಪರ್ಧಿಸಲು ಸುಧೀರ ಗಡ್ಡೆ ಪರ ಕೈ ನಾಯಕರ ಒಲವು
ಬಿಜೆಪಿ ಮಣಿಸಲು ಸುಧೀರ ಗಡ್ಡೆ ಸೂಕ್ತ ಎಂದ ವರಿಷ್ಠರು
ಬೆಳಗಾವಿ: ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಉತ್ತರ ಮತಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಇಚ್ಛಿಸಿರುವ ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ ಪರವಾಗಿ ಕೈ ನಾಯಕರು ಒಲವು ತೋರಿದ್ದು, ಬಿಜೆಪಿ ಮಣಿಸಲು ಸುಧೀರ ಗಡ್ಡೆ ಸೂಕ್ತ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಉತ್ತರ ಮತಕ್ಷೇತ್ರದಿಂದ ಹಲವು ಆಕಾಂಕ್ಷಿಗಳು ಕೆಪಿಸಿಸಿಗೆ ಟಿಕೆಟ್ ಬಯಸಿ ಬೆಂಗಳೂರಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆಂಬ ಕಾಂಗ್ರೆಸ್ ವರಿಷ್ಠರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಿಜೆಪಿಯನ್ನು ಸೋಲಿಸಬೇಕಾದರೆ ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಉದ್ಯಮಿ ಸುಧೀರ ಗಡ್ಡೆ ಅವರೇ ಕಾಂಗ್ರೆಸ್ ನಿಂದ ಸೂಕ್ತ ಎಂಬುದು ಸಭೆಯಲ್ಲಿ ಚರ್ಚೆಯಾಗಿದೆ.
ಸುಧೀರ ಗಡ್ಡೆ ಅವರು ಒಂದೆಡೆ ಮುಸ್ಲಿಂ, ಲಿಂಗಾಯತ, ಮರಾಠಾ, ಎಸ್ ಸಿ, ಎಸ್ ಟಿ ಸೇರಿದಂತೆ ಹಿಂದುಳಿದ ವರ್ಗಗಳ ಮತಗಳ ಮೇಲೆ ಹಿಡಿತ ಸಾಧಿಸಿದ್ದು, ಎಲ್ಲ ಸಮಾಜದವರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದಾರೆ.
ಫಿರೋಜ ಸೇಠ ಮುಸ್ಲಿಂ ಮತಗಳ ಮೇಲೆ ಬಲವಾದ ವಿಶ್ವಾಸ ಇಟ್ಟುಕೊಂಡಿದ್ದಾರೆ. ಬಿಜೆಪಿ ಶಾಸಕ ಅನಿಲ್ ಬೆನಕೆ ಮಣಿಸಲು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅನೇಕ ಘಟಾನುಘಟಿ ನಾಯಕರು ತುದಿಗಾಲಲ್ಲಿ ನಿಂತಿದ್ದು, ಪ್ರಮುಖವಾಗಿ ಫಿರೋಜ ಸೇಠ, ಸುಧೀರ ಗಡ್ಡೆ ಹೆಸರು ಮುಂಚೂಣಿಯಲ್ಲಿದೆ. ಇನ್ನೂ ಅನೇಕರು ರೇಸ್ ನಲ್ಲಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಮುಸ್ಲಿಂ, ಮರಾಠಾ, ಎಸ್ ಸಿ, ಎಸ್ ಟಿ ಹಾಗೂ ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್ ಈಗಿನಿಂದಲೇ ತಯಾರಿ ಜೋರಾಗಿ ನಡೆಸಿದೆ.
ಎಪಿಎಂಸಿ ಮಾಜಿ ಉಪಾಧ್ಯಕ್ಷ ಸುಧೀರ ಗಡ್ಡೆ, ಮಾಜಿ ಶಾಸಕ ಫಿರೋಜ ಸೇಠ ಸೇರಿ ಅನೇಕರು ಅರ್ಜಿ ಸಲ್ಲಿಸಿದ್ದಾರೆ.
ಈ ಬಾರಿ ಟಿಕೆಟ್ ಆಕಾಂಕ್ಷಿಗಳಿಗೆ ಕೆಪಿಸಿಸಿ 2 ಲಕ್ಷ ರೂ. ಹಣ ಮುಂಗಡವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕೆಂಬ ನಿಯಮ ವಿಧಿಸಿದೆ. ಅದರಂತೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.