ಯುವ ಭಾರತ ಸುದ್ದಿ ದೆಹಲಿ :
ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಇದೆ. ಈ ನಡುವೆ ಮಹಾರಾಷ್ಟ್ರ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಒತ್ತಾಯಿಸುತ್ತಿದೆ. ಇದು ಮಹಾರಾಷ್ಟ್ರಕ್ಕೆ ಸುಪ್ರೀಂಕೋರ್ಟ್ ನೀಡುವ ತೀರ್ಪಿನ ಮೇಲೆ ಅನುಮಾನ ಇಲ್ಲವೋ ಎಂಬಂತಾಗಿದೆ.
ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಕಾದು ನೋಡುವಷ್ಟು
ತಾಳ್ಮೆ ಮಹಾರಾಷ್ಟ್ರಕ್ಕೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯ ಈಗ ಅವಸರದಲ್ಲಿದೆ.
ಗಡಿ ವಿವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಧ್ಯಸ್ಥಿಕೆಗೆ ಆ ರಾಜ್ಯ ರಣತಂತ್ರ ನಡೆಸುತ್ತಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸಮರಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಕರ್ನಾಟಕದ ಪಾಲಿಗೆ ಎಂದೋ ಮುಗಿದು ಹೋಗಿರುವ ಈ ಬಹುದಿನಗಳ ಚರ್ಚೆಗೆ ಮಹಾರಾಷ್ಟ್ರ ಒಂದಿಲ್ಲ ಒಂದು ರೀತಿಯಲ್ಲಿ ಕೆಣಕುತ್ತಲೇ ಇದೆ. ಮಹಾರಾಷ್ಟ್ರದ ಎನ್ ಸಿ ಪಿ ನಾಯಕ ಹಾಗೂ ಸಂಸದ ಅಮೋಲ್ ಕೋಲ್ಹೆ ಅವರು ಹೇಳಿಕೆ ನೀಡಿದ್ದು ಕೇಂದ್ರದ ಗ್ರಹ ಸಚಿವ ಅಮಿತ್ ಶಾ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಡಿ.14 ರಂದು ಭೇಟಿಯಾಗಿ ಚರ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎಂ) ಸಂಸದರ ನಿಯೋಗ ಅಮಿತ್ ಶಾ ಅವರನ್ನು ಭೇಟಿ ಮಾಡಿದೆ. ಈ ಬಗ್ಗೆ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿರುವುದಾಗಿ ಹೇಳಿದ್ದಾರೆ.
ಹಾತಕಣಗಲೆ ಶಿವಸೇನೆ ಸಂಸದ ಹಾಗೂ ಮಹಾರಾಷ್ಟ್ರ ಗಡಿ ಸಲಹಾ ಸಮಿತಿಯ ಅಧ್ಯಕ್ಷ ಧೈರ್ಯಶೀಲ ಮಾನೆ ಲೋಕಸಭೆಯಲ್ಲಿ ಗಡಿ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಅಮಿತ್ ಶಾ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.
ಗಡಿ ವಿವಾದ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಮಹಾರಾಷ್ಟ್ರದವರೇ ಆಗಿದ್ದ ಕೇಂದ್ರ ಗೃಹ ಸಚಿವ ಶಿವರಾಜ ಪಾಟೀಲರ ಒತ್ತಡದಿಂದ ಮಹಾರಾಷ್ಟ್ರ ಸುಪ್ರೀಂಕೋರ್ಟಿಗೆ ಗಡಿ ವಿವಾದ ಸಂಬಂಧ ತನ್ನ ರಾಜ್ಯದ ಪರ ಅಫಿಡವಟ್ ಸಲ್ಲಿಸಿತ್ತು. ಆಗ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಕೇಂದ್ರ ಸರಕಾರ ಆಫಿಡೆವಿಟ್ ಹಿಂಪಡೆದುಕೊಂಡಿತ್ತು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಾಯಕ ಸ್ಥಿತಿಯಲ್ಲಿ ಗಡಿ ವಿವಾದ ಇದೆ. ಕೋರ್ಟ್ ನೀಡುವ ತೀರ್ಪು ಬರುವ ಮುನ್ನವೇ ಮಹಾರಾಷ್ಟ್ರ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಒತ್ತಡ ಹೇರಲು ಮುಂದಾಗಿರುವುದು ಕರ್ನಾಟಕದ ಪಾಲಿಗೆ ದೊಡ್ಡ ಹಿನ್ನಡೆ.