2019ರ ಪ್ರವಾಹದ ಸ್ಥಿತಿ ಈಗಿಲ್ಲ|| 3 ಡ್ಯಾಂಗಳು
ಇನ್ನೂ ತುಂಬಿಯೇ ಇಲ್ಲ..!! ಮಳೆಯ
ಪ್ರಮಾಣವೂ ತಗ್ಗುತ್ತಿದೆ|| ಜನತೆಯಲ್ಲಿ
ಗಾಬರಿ ವಾತಾವರಣ ಸಲ್ಲದು||
ಮುನ್ನೆಚ್ಚರಿಕೆ ಮಾತ್ರ ಇರಲೇಬೇಕು..!!
ಅಶೋಕ ಚಂದರಗಿ, ಬೆಳಗಾವಿ
ಯುವ ಭಾರತ ಸುದ್ದಿ ವಿಶೇಷ
ಕೊರೋನಾದಿಂದಾಗಿ ಮೊದಲೇ ಕಂಗೆಟ್ಟು ಹೋಗಿರುವ ಜನತೆಯಲ್ಲಿ ನೆರೆಹಾವಳಿಯ ಬಗ್ಗೆ ಭಯ ಬಿತ್ತುವ ಸುದ್ದಿಗಳನ್ನು ಪ್ರಸಾರ ಮಾಡುವದರ
ವಿರುದ್ಧ ನದಿ ತೀರಗಳ ಜನತೆಯಿಂದ ತೀವ್ರ ಅಕ್ರೋಶ,ಅಸಮಾಧಾನ ವ್ಯಕ್ತವಾಗುತ್ತಿದೆ.
ಕಳೆದ ವರ್ಷದ ಟಿವ್ಹಿ ಸುದ್ದಿಗಳ
ತುಣುಕುಗಳನ್ನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಮಜಾ
ನೋಡುತ್ತಿರುವ ಘಟನೆಗಳೂ ಸಹ ನಡೆದಿದ್ಫು ಈ ಬಗ್ಗೆ ನಾನೇ ಅನೇಕರಿಗೆ ವಾಸ್ತವ ಸ್ಥಿತಿಯನ್ನು ತಿಳಿಸುತ್ತಿದ್ದೇನೆ.
ಕಳೆದ ವರ್ಷದ ಅಗಷ್ಟ ತಿಂಗಳಲ್ಲಿ ಮಹಾರಾಷ್ಟ್ರದ ಸಾತಾರಾ ಬಳಿಯ
ಕೊಯ್ನಾ ಜಲಾಶಯದಿಂದ ಅಪಾರ
ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಿದ್ದರಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸಾವಿರಾರು ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿತ್ತು.ಆ ಕರಾಳ ಘಟನೆಯ ನೆನಪು ಇನ್ನೂ ಹಸಿಯಾಗಿಯೇ ಉಳಿದಿರುವ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಕೊಯ್ನಾದತ್ತ ನೆಟ್ಟಿರುವದು ಸಹಜವಾಗಿದೆ.
105 ಟಿ ಎಮ್ ಸಿ ಸಾಮರ್ಥ್ಯದ ಕೊಯ್ನಾ ಜಲಾಶಯದಲ್ಲಿ ಇಂದು ಶನಿವಾರ ಮಧ್ಯಾನ್ಹದವರೆಗೂ 71 ಟಿ ಎಮ್ ಸಿ ಯಷ್ಟು ಮಾತ್ರ ನೀರಿನ ಸಂಗ್ರಹವಿದೆ.ಕೊಯ್ನಾ ಸುತ್ತಮುತ್ತಲೂ ಮಳೆಯ ಪ್ರಮಾಣವೂ
ತಗ್ಗಿದೆ.ಡ್ಯಾಮ್ 90 ರಿಂದ 100 ಟಿಎಮ್ ಸಿ ತುಂಬಿದ ನಂತರವಷ್ಟೇ ಕ್ರಮೇಣ ನೀರು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಘಟಪ್ರಭಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬಳಿ ನಿರ್ಮಿಸಿರುವ
ಹಿಡ್ಕಲ್ ಆಣೆಕಟ್ಟಿನಲ್ಲಿ ಶನಿವಾರ ಮಧ್ಯಾನ್ಹದವರೆಗೂ 43 ಟಿ ಎಮ್ ಸಿ ನೀರಿನ ಸಂಗ್ರಹವಾಗಿದೆ.ಒಟ್ಟು ಸಾಮರ್ಥ್ಯ 51.ನಿನ್ನೆ ಒಳ ಹರಿವು 48 ಸಾವಿರ ಕ್ಯೂಸೆಕ್ಸ ಇದ್ದದ್ದು ಶನಿವಾರ ಮಧ್ಯಾನ್ಹ 42 ಸಾವಿರಕ್ಕೆ ತಗ್ಗಿದೆ.ನೀರಿನ ಸಂಗ್ರಹ 45 ರಿಂದ 48 ಟಿಎಮ್ ಸಿ ತಲುಪಿದಾಗ ಕ್ರಮೇಣ ನೀರು ಬಿಡುಗಡೆ ಆರಂಭವಾಗಲಿದೆ.
ರವಿವಾರ ಅಗಷ್ಟ 9 ರಂದು ಜಲಸಂಪನ್ಮೂಲ ಖಾತೆಯ ಸಚಿವ ಶ್ರೀ ರಮೇಶ ಜಾರಕಿಹೊಳಿಯವರು ಮಾರ್ಕಂಡೆಯ ಆಣೆಕಟ್ಟೆಗೆ ಭೆಟ್ಟಿ ಕೊಡಲಿದ್ದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.
ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಶನಿವಾರ ಮಧ್ಯಾನ್ಹ 14 ಸಾವಿರ ಕ್ಯೂಸೆಕ್ಸ ಗೆ ತಗ್ಗಿದೆ.ಹೊರ ಹರಿವು ನದಿಗೆ ಐದು ಸಾವಿರ,ನಾಲೆಗಳಿಗೆ 1500 ಕ್ಯೂಸೆಕ್ಸ ಇದೆ.37.7 ಟಿ ಎಮ್ ಸಿ ಸಾಮರ್ಥ್ಯದ ಆಣೆಕಟ್ಟೆಯಲ್ಲಿ ಸದ್ಯ 27 ಟಿ ಎಮ್ ಸಿ ನೀರಿನ ಸಂಗ್ರಹವಿದೆ.
ಕಳೆದ 2019 ರ ಅಗಷ್ಟ 8 ರಂದು ನವಿಲುತೀರ್ಥ ದಿಂದ ಒಂದು ಲಕ್ಷ ಕ್ಯೂಸೆಕ್ಸ ನೀರನ್ನು ಬಿಡುಗಡೆ ಮಾಡಲಾಗಿತ್ತು.ಇದರಿಂದಾಗಿ ನದಿ ತೀರದ ನೂರಾರು ಹಳ್ಳಿಗಳು ಪ್ರವಾಹಕ್ಕೆ
ತುತ್ತಾಗಿದ್ದವು.ಆ ಸ್ಥಿತಿಯ ಕಾಲು
ಭಾಗದಷ್ಟೂ ಹಂತವನ್ನೂ ಸಹ ಸದ್ಯದ ಸ್ಥಿತಿ ತಲುಪಿಲ್ಲ.
ಸದ್ಯ ಕೃಷ್ಣಾ ಹಾಗೂ ಉಪನದಿಗಳ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿಯೇ ನದಿಯ ಪ್ರಮಾಣದಲ್ಲಿ ಏರಿಳಿತಗಳು ಕಂಡು ಬರುತ್ತಿದೆ.ಚಿಕ್ಕೋಡಿ,ಅಥಣಿ,ನಿಪ್ಪಾಣಿ,ಕಾಗವಾಡ ತಾಲೂಕುಗಳ ಎಂಟು ಸೇತುವೆಗಳು ಇದೇ ಮಳೆಗಾಲದಲ್ಲಿ ಐದನೇ ಬಾರಿ ಮುಳುಗಡೆಯಾಗಿವೆ.ಆದರೆ ಮಳೆಯ ಪ್ರಮಾಣವು ತಗ್ಗಿದ ಕೂಡಲೇ ತೆರವಾಗುತ್ತವೆ.
ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.ಆದರೆ ಯಾವ ಗ್ರಾಮಗಳ ಜನರಿಗೆ ಎಲ್ಲೆಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ನಿರ್ಧಿಷ್ಟವಾಗಿ ತಿಳಿಸುವದಲ್ಲದೇ ಅಲ್ಲಿಗೆ ಕರೆದೊಯ್ಯುವ ವ್ಯವಸ್ಥೆಯನ್ನೂ ಮಾಡುವದು ಒಳ್ಳೆಯದು.
ಕೊರೋನಾ ಹಿನ್ನೆಲೆಯಲ್ಲಿ ಪ್ರವಾಹ
ಸಂತ್ರಸ್ಥರ ಆರೋಗ್ಯದ ಬಗೆಗೂ ಸರಕಾರ ಹೆಚ್ಚಿನ ಮುತವರ್ಜಿ ವಹಿಸುವದು ಸೂಕ್ತ.