ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ಐಎನ್‌ಎ ಪಾತ್ರ ಹಿರಿದು
ಆಜಾದ್ ಹಿಂದ್ ಫೌಜ್ ಸ್ವಾತಂತ್ರ್ಯ ಸಂಗ್ರಾಮದ ಸ್ವರ್ಣೀಮ ಅಧ್ಯಾಯ ಕುರಿತು ಉಪನ್ಯಾಸ
ಯುವ ಭಾರತ ಸುದ್ದಿ ಬೆಳಗಾವಿ:ಎರಡನೇ ವಿಶ್ವಯುದ್ಧದ ತರುವಾಯ ಭಾರತದಲ್ಲಿ ಜರುಗಿದ ನೌಕಾ ಬಂಡಾಯ ಮತ್ತು ಭಾರತೀಯ ಸೈನ್ಯದಲ್ಲಿ ಬ್ರಿಟಿಷ ಆಡಳಿತ ವಿರುದ್ಧ ದಂಗೆ ಉಂಟಾದ ಕಾರಣ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು. ಇದಕ್ಕೆಲ್ಲ ಹಿನ್ನೆಲೆ ರಚನೆಗೊಂಡಿದ್ದು ಆಜಾದ ಹಿಂದ ಫೌಜ್ ಮತ್ತು ಅದನ್ನು ಸಂಘಟಿಸಿದ ಸುಭಾಷಚಂದ್ರ ಭೋಸ್ ಅವರಿಂದ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಕೆಎಲ್‌ಎಸ್ ಗೋಗಟೆ ವಾಣಿಜ್ಯ ಕಾಲೇಜಿನ ವೇಣುಗೋಪಾಲ ಸಭಾಂಗಣದಲ್ಲಿ ಪ್ರಬುದ್ಧ ಭಾರತ ಇತ್ತೀಚೆಗೆ ಏರ್ಪಡಿಸಿದ್ದ, ಆಜಾದ ಹಿಂದ ಫೌಜ್ ಸ್ವಾತಂತ್ರ್ಯ ಸಂಗ್ರಾಮದ ಒಂದು ಸ್ವರ್ಣೀಮ ಅಧ್ಯಾಯದ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಸುಭಾಷಚಂದ್ರ ಭೋಸ್, ಆಜಾದ್ ಹಿಂದ್ ಫೌಜ್ ಸೈನಿಕರ ಶೌರ್ಯ, ರಾಶ್ ಬಿಹಾರಿ ಭೋಸ್ ಮತ್ತು ನೌಕಾಬಂಡಾಯದ ಮಹತ್ವದ ಕುರಿತಾಗಿ ಇಂದಿನ ಪೀಳಿಗೆ ತಿಳಿಯುವುದು ಅತಿ ಅವಶ್ಯ. ಸ್ವಾತಂತ್ರ್ಯ ನಂತರ ದೇಶದ ಚುಕ್ಕಾಣಿ ಹಿಡಿದ ನೆಹರೂ ಸರ್ಕಾರ, ಕಾಂಗ್ರೆಸ್, ಗಾಂಧೀಜಿ ಮತ್ತು ನೆಹರೂ ಹೊರತಾಗಿ ದೇಶದಲ್ಲಿ ಯಾರು ಸ್ವಾತಂತ್ರ್ಯ ಹೋರಾಟ ಮಾಡಿಯೇ ಇಲ್ಲ ಎಂಬಂತೆ ಶಿಕ್ಷಣದ ಮೂಲಕ ನಂತರದ ಪೀಳಿಗೆಗೆ ತಿಳಿಸಿರುವುದು ಖೇದಕರ ಸಂಗತಿ. ಹಾಗಾಗಿ, ಸರ್ಕಾರ ಬದಲಾಗಿ ಇಂದಿನ ಯುವ ಜನತೆ ಮರೆಯಾಗಿ ಹೋದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಗಾಥೆಯನ್ನು ಶಾಲೆಗೆ ಹೋಗಿ ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದರು.
ಸುಭಾಷಚಂದ್ರ ಭೋಸ್ ಅದಮ್ಯ ಸಾಹಸಿ ಮತ್ತು ಸ್ವಾಭಿಮಾನಿ ವ್ಯಕ್ತಿತ್ವ ಹೊಂದಿದ್ದರು. ಐಸಿಎಸ್ ಪರೀಕ್ಷೆ ಉತ್ತೀರ್ಣರಾಗಿ ಬಂಗಾಳದ ಪ್ರಾಂತ್ಯದ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ, ಅನೇಕ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಪಿಂಚಣಿ ಮತ್ತು ಅವಶ್ಯಕ ಸಹಾಯ ಒದಗಿಸುತ್ತಿದ್ದರು. ಬ್ರಿಟಿಷರ ವಿರುದ್ಧ ಸಿಡಿದೆದ್ದು, ಐಸಿಎಸ್ ಹುದ್ದೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಸೇರಿದರು. ಆದರೆ, ಮಂದಗಾಮಿಗಳ ಕೂಟವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿ ಪ್ರಖರ ರಾಷ್ಟ್ರವಾದಿಗಳನ್ನಾಗಿ ಮಾಡಿದ ಖ್ಯಾತಿ ಭೋಸ್ ಅವರದ್ದಾಗಿದೆ. ನಂತರದಲ್ಲಿ ಸುಭಾಷಚಂದ್ರ ಭೋಸ್ ಅವರು ಭೂಗತವಾಗಿ ಅಫಘಾನಿಸ್ಥಾನದ ಮೂಲಕ ಜರ್ಮನ ಪ್ರಯಾಣ ಬೆಳೆಸಿ, ಹಿಟ್ಲರ್ ಸಹಾಯದ ಭೇಟಿಯಾಗಿ, ಬಂಧಿತ ಭಾರತೀಯ ಸೈನಿಕರನ್ನು ಮುಕ್ತಗೊಳಿಸಿ, ಆಜಾದ್ ಹಿಂದ್ ಫೌಜ್ ಸಂಘಟಿಸಿದರು. ಅಷ್ಟೇ ಅಲ್ಲದೇ ಕೆಲವರನ್ನು ಬೇಹುಗಾರರನ್ನಾಗಿ ತರಬೇತಿ ನೀಡಿ, ಬ್ರಿಟಿಷರ ನೇತೃತ್ವದ ಭಾರತೀಯ ಸೈನ್ಯದಲ್ಲಿ ಸೇರಿಕೊಂಡು ಬ್ರಿಟಿಷರ ವಿರುದ್ಧ ಭಾರತೀಯ ಸೈನ್ಯ ಬಂಡಾಯ ಏಳುವಂತೆ ತಂತ್ರಗಾರಿಕೆ ರೂಪಿಸುವಂತೆ ಸಲಹೆ ನೀಡಿದರು. ಸಾವರ್ಕರ್ ಮತ್ತು ಸುಭಾಷಚಂದ್ರ ಭೋಸ್ ಅನೇಕ ಭಾರಿ ಭೇಟಿಯಾಗಿದ್ದಾರೆ. ಕಾಂಗ್ರೆಸ್ ಸೇರುವ ಮುನ್ನ ಮತ್ತು ತೊರೆಯುವ ಮುನ್ನ ಸಾವರ್ಕರ ಅವರನ್ನು ಸುಭಾಷ್‌ಚಂದ್ರ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಸಾವರ್ಕರ ಅವರ ದೇಶ ತೊರೆದು ವಿದೇಶದಲ್ಲಿ ಸೈನ್ಯ ಸಂಘಟಿಸಿ ಬ್ರಿಟಿಷ್‌ರ ವಿರುದ್ಧ ದಾಳಿ ಮಾಡಿ, ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವಂತೆ ಸಲಹೆ ನೀಡಿದ್ದರು. ಅಜಾದ್ ಹಿಂದ್ ಫೌಜ್ ನಿರ್ಮಾಣದಲ್ಲಿ ಮತ್ತು ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಲ್ಲಿ ಸಾವರ್ಕರ್ ಮತ್ತು ಸುಭಾಷಚಂದ್ರ ಬೋಸ್ ಅವರ ದೂರದೃಷ್ಟಿಯೇ ಕಾರಣ ಎಂದು ವಿವರಿಸಿದರು.
ನಿವೃತ್ತ ಸೇನಾ ಅಧಿಕಾರಿ ಕರ್ನಲ್ ಮಧುಕರ ಕದಮ್ ಮತ್ತು ಸಚಿನ ಸಬನಿಸ್ ಇದ್ದರು.