ಪ್ರಧಾನಮಂತ್ರಿಗಳ ಮನವಿಯಂತೆ ಮೈಮರೆಯದೇ ಹಬ್ಬಗಳನ್ನು ಆಚರಿಸಿ – ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕರೆ..!!
ಯುವ ಭಾರತ ಸುದ್ದಿ, ಗೋಕಾಕ್: ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರು ನಿನ್ನೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಜನತೆ ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದೇ ಇರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅನೇಕ ಹಬ್ಬಗಳ ಆಚರಣೆಯ ಸಂಭ್ರಮದಲ್ಲಿ ಮೈ ಮರೆಯದೇ ಎಚ್ಚರಿಕೆ ಮತ್ತು ಸುರಕ್ಷತೆಯಿಂದ ಹಬ್ಬಗಳನ್ನು ಆಚರಿಸುವಂತೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಜನತೆಗೆ ಕರೆ ನೀಡಿದ್ದಾರೆ.
ಪ್ರಧಾನಿ ಮೋದಿಯವರು ಹೇಳಿದಂತೆ ಅಗತ್ಯ ಅರೋಗ್ಯ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ನೈರ್ಮಲ್ಯ ಕಾಪಾಡಿ ಹಾಗೂ ಸಾಮಾಜಿಕ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಸುರಕ್ಷಿತವಾಗಿ ನವರಾತ್ರಿ ಮತ್ತು ದಸರಾ, ವಿಜಯ ದಶಮಿ ಹಬ್ಬಗಳನ್ನು ಆಚರಣೆ ಮಾಡುವಂತೆ ಸಚಿವ ಜಾರಕಿಹೊಳಿ ಹೇಳಿದ್ದಾರೆ.
ಕೋವಿಡ್ ಸೋಂಕು ತಡೆಗೆ ಲಸಿಕೆಯನ್ನು ಹೊಂದುವ ಹಾಗೂ ಜನರಿಗೆ ವಿತರಿಸುವ ಬಗ್ಗೆ ಪ್ರಧಾನಿ ಮೋದಿಯವರು ವಿಶ್ವಾಸದ ಮಾತುಗಳನ್ನು ಹೇಳಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ಕರ್ನಾಟಕ ರಾಜ್ಯದ ಹಲವು ವಿಜ್ಞಾನಿಗಳೂ ಕೂಡಾ ಇದರಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ. ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಯಶಸ್ಸು ಸಿಗಲಿ ಎಂದು ಹಬ್ಬದ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿ ಎಂದು ರಮೇಶ್ ಜಾರಕಿಹೊಳಿಜನತೆಯಲ್ಲಿ ಮನವಿ ಮಾಡಿದ್ದಾರೆ.