Breaking News

ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ : ರಮೇಶ್ ಜಾರಕಿಹೊಳಿ ಶಪಥ

Spread the love

ಗೋಕಾಕ ವಿಧಾನಸಭಾ ಮತಕ್ಷೇತ್ರದ ಕುಂದರನಾಡಿನ ಪ್ರಮುಖ ಕೇಂದ್ರ ಸ್ಥಾನವಾಗಿರುವ ಅಂಕಲಗಿಯಲ್ಲಿ ಭಾನುವಾರ ಸಂಜೆ ಶಾಸಕ ರಮೇಶ ಜಾರಕಿಹೊಳಿ ಅವರು ಬಿಜೆಪಿ ಚುನಾವಣೆ ರಣಕಹಳೆಯೂದಿದ್ದಾರೆ. ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಕಮಲ ಪಕ್ಷದ ಪರ ಜೈಕಾರ ಹಾಕಿದ್ದಾರೆ. ಹಿಂದೆಂದಿಗಿಂತಲೂ ಭರ್ಜರಿ ಅಂತರದಿಂದ ಹಾಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಿಯೇ ತೀರಬೇಕು ಎಂದು ಬಿಜೆಪಿ ಕಾರ್ಯಕರ್ತರು ಜೈಘೋಷ ಮೊಳಗಿಸಿದರು. ಒಟ್ಟಾರೆ, ಇಡೀ ಅಂಕಲಗಿ ಪರಿಸರ ಭಾನುವಾರ ಕಮಲಮಯವಾಗಿ ಪರಿವರ್ತನೆಗೊಂಡಿತು. ಬಿಜೆಪಿ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಂತಿತ್ತು.

ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಸರಕಾರ : ರಮೇಶ್ ಜಾರಕಿಹೊಳಿ ಶಪಥ

ಯುವ ಭಾರತ ಸುದ್ದಿ ಗೋಕಾಕ :
ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಹೇಗಾದರೂ ಮಾಡಿ ನಮ್ಮ ಸರಕಾರವನ್ನೇ ಅಧಿಕಾರಕ್ಕೆ ತರಲಾಗುವುದು. ಬಿಜೆಪಿಯನ್ನೇ ಅಧಿಕಾರಕ್ಕೆ ತರುವ ಶಪಥ ಮಾಡಲಾಗಿದೆ ಎಂದು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ಅಂಕಲಗಿಯಲ್ಲಿ ಭಾನುವಾರ ರಾತ್ರಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.

ಚುನಾವಣೆ ಕಾಲಕ್ಕೆ ನನ್ನ ಬಗ್ಗೆ ಹಾಗೂ ಜಾರಕಿಹೊಳಿ ಕುಟುಂಬದ ಬಗ್ಗೆ ಹಲವು ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಲಿಂಗಾಯತರು, ಬಡವರು, ಮುಸ್ಲಿಂ ವಿರೋಧಿ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲರನ್ನೂ ಪ್ರೀತಿ ಮಾಡಿದರೆ ಮಾತ್ರ ಶಾಸಕರಾಗಲು ಸಾಧ್ಯ. ಇಲ್ಲವಾದರೆ ಶಾಸಕರಾಗಲು ಅಯೋಗ್ಯ. ನಾನು ಎಲ್ಲಾ ಸಮಾಜದವರ ಮೇಲೆ ಮೊದಲಿನಿಂದಲೂ ಪ್ರೀತಿ ಹೊಂದಿರುವೆ. ಆದರೆ ಇದೀಗ ಎರಡು ವರ್ಷದಿಂದ ನನ್ನ ಮೇಲೆ ಅಪಪ್ರಚಾರ ನಡೆಸಲಾಗುತ್ತಿದೆ. ಈ ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಈ ಬಗ್ಗೆ ನನ್ನ ಮಗನ ಬಳಿಯೇ ಹೇಳಿಕೊಂಡಿದ್ದಾನೆ. ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಆತನೇ ಒಪ್ಪಿಕೊಂಡಿದ್ದಾನೆ. ಆದರೆ ನಾನು ಆತನ ಬಗ್ಗೆ ವೈಯಕ್ತಿಕ ವಾಗಿ ಎಂದಿಗೂ ಮಾತನಾಡಲಾರೆ. ಅವನ ಪತ್ನಿ ನನ್ನ ಸಹೋದರಿ ಇದ್ದಂತೆ. ನಾನು ಎಂದಿಗೂ ಅವನ ವೈಯಕ್ತಿಕ ವಿಷಯವನ್ನು ಮಾತನಾಡಲಾರೆ, ಚುನಾವಣೆ ಕಾಲಕ್ಕೆ ಸುಳ್ಳು ಹೇಳುವುದು ಕಾಂಗ್ರೆಸ್ಸಿಗರ ಕೆಲಸ. ಆದರೆ ಬಿಜೆಪಿ ಎಂದಿಗೂ ಹಾಗೆ ಮಾಡದು. ಜನರ ಮೇಲೆ ಪ್ರೀತಿ ಇದ್ದರೆ ಮಾತ್ರ ನಮಗೆ ಮತ ಹಾಕಲಿ. ಸುಳ್ಳು ಭರವಸೆ ನೀಡಿ ಮತ ಪಡೆಯಬೇಡಿ ಎನ್ನುವುದು ಬಿಜೆಪಿ ಸಿದ್ಧಾಂತ. ಈ ಬಗ್ಗೆ ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು
ನಮಗೆ ವಾರ್ನಿಂಗ್ ಮಾಡಿದ್ದಾರೆ. ಆದರೆ ಕಾಂಗ್ರೆಸ್ಸಿನ ಸ್ವಯಂಘೋಷಿತ ನಾಯಕರು ಮತ್ತು ನಾಯಕಿಯರು ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅವರನ್ನು ಎಂದಿಗೂ ನಂಬಬೇಡಿ. ಬಿಜೆಪಿ ನೀರಾವರಿ, ಬಡವರಿಗೆ ಮನೆ, ಹಾಗೂ ನಿರುದ್ಯೋಗ ನಿವಾರಣೆ ಮುಂತಾದ ಕೆಲಸಕ್ಕೆ ಆದ್ಯತೆ ನೀಡಿದೆ. ನಾನು ಮೊದಲ ಬಾರಿ ಗೋಕಾಕ ಶಾಸಕನಾದಾಗ ಈ ಭಾಗದ ಜನತೆ ಬಹಳ ತೊಂದರೆ ಅನುಭವಿಸುತ್ತಿದ್ದರು. ಹಲವು ಸಮಸ್ಯೆಗಳಿಂದ ನರಳುತ್ತಿದ್ದರು. ಅವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂಕಲಗಿಯಲ್ಲಿ ಸುಸಜ್ಜಿತ ಆಸ್ಪತ್ರೆಗೆ ಅಡಿಗಲ್ಲು ಹಾಕಲಾಗಿದೆ. ಗೋಕಾಕ ನಲ್ಲಿ ಆಸ್ಪತ್ರೆ ಮಾಡಿ ಇಡೀ ಮತಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಿರುವುದಾಗಿ ಅವರು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಮುಖ್ಯಮಂತ್ರಿ ಮತ್ತೆ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೂ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗುವುದು ಖಚಿತ. ಮೋದಿ ಅವರಿಂದಾಗಿ ಇಂದು ಇಡೀ ದೇಶದ ಚಿತ್ರಣವೇ ಬದಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕವನ್ನು ಹಿಂದಕ್ಕೆ ಭಾರತವೇ ವಿಶ್ವದ ದೊಡ್ಡಣ್ಣ ಆಗುವುದು ಖಚಿತ. ನಿಜವಾದ ಕೋಮುವಾದಿ ಕಾಂಗ್ರೆಸ್ ಪಕ್ಷ. ಆ ಪಕ್ಷವನ್ನು ಸೋಲಿಸಬೇಕು ಎಂದು ಅವರು ಕರೆ ನೀಡಿದರು.

ಕೆಲವೇ ದಿನಗಳಲ್ಲಿ ಗೋಕಾಕ ನಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುವ ಉದ್ದೇಶವಿದೆ. 25 ರಿಂದ 30 ಸಾವಿರ ಜನರನ್ನು ಸೇರಿಸಿ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗುವುದು. ಗೋಕಾಕ ನಲ್ಲಿ ನಡೆಯುವ ಈ ಸಮಾವೇಶ ಮುಗಿದ ನಂತರ ಮತಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಪರ ಬೂತ್ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಲಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ನಮ್ಮ ಸರಕಾರ ರಚನೆಯಾಗುವುದು ಶತಸಿದ್ಧ. ಮೇ ಅಂತ್ಯದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಸರಕಾರ ರಾಜ್ಯದಲ್ಲಿ ಮತ್ತೊಮ್ಮೆ ರಚನೆಯಾಗುವುದು ಖಚಿತ. ಎದುರಾಳಿಗಳು ಈಗ ಗ್ಯಾರಂಟಿಗಳ ಭರವಸೆ ನೀಡಿದ್ದಾರೆ. ಛತ್ತೀಸ ಗಢ, ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಅವರು ಈ ಹಿಂದೆ ಹಲವು ಭರವಸೆ ನೀಡಿದ್ದಾರೆ. ಆ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರೂ ಇರುವರೆಗೂ ಅವುಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.

ಚುನಾವಣೆ ಕಾಲಕ್ಕೆ ಸುಳ್ಳು ಹೇಳುವುದು ಅವರ ಕೆಲಸವಾಗಿದೆ. ನಮ್ಮ ನಾಯಕರಾದ ನರೇಂದ್ರ ಮೋದಿ, ಗ್ರಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರು ಮತದಾರರಿಗೆ ಯಾವುದೇ ಸುಳ್ಳು ಹೇಳದಂತೆ ನಮಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಾದರೂ ಆದೀತು. ಜನರಿಗೆ ಮಾತ್ರ ಸುಳ್ಳು ಹೇಳಲು ಹೋಗಬೇಡಿ ಎಂದು ನಮ್ಮ ನಾಯಕರು ಈಗಾಗಲೇ ಸೂಚನೆ ನೀಡಿದ್ದಾರೆ. ಕರ್ನಾಟಕ ಹಾಗೂ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬಿಜೆಪಿ ಗೆಲುವು ಸಾಧಿಸುವಂತಾಗಬೇಕು. ನಮ್ಮ ತತ್ವ ಸಿದ್ಧಾಂತಗಳನ್ನು ಮೀರಿ ಎಂದಿಗೂ ನಾವು ಜನರಿಗೆ ಸುಳ್ಳು ಹೇಳುವುದು ಬೇಡ. ಇದು ನಮ್ಮ ಪಕ್ಷದ ನಿಲುವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜಾತಿ ಜಾತಿಗಳ ವಿರುದ್ಧ ಎತ್ತಿ ಕಟ್ಟುವುದೇ ಮಹಾ ನಾಯಕನ
ಕೆಲಸ : ಮತ್ತೆ ಡಿಕೆಶಿ ವಿರುದ್ದ ಕೆಂಡ ಕಾರಿದ ರಮೇಶ ಜಾರಕಿಹೊಳಿ !

ಕಾಂಗ್ರೆಸ್ ಪಕ್ಷದ ಸುಳ್ಳು ಪ್ರಚಾರಕ್ಕೆ ಎಂದಿಗೂ ಬಲಿಯಾಗಬೇಡಿ, ವಿವಿಧ ಜಾತಿ ಜಾತಿಗಳ ವಿರುದ್ಧ ಎತ್ತಿ ಕಟ್ಟುವುದೇ ಮಹಾ ನಾಯಕನ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಮೇಶ ಜಾರಕಿಹೊಳಿಯವರನ್ನು ಲಿಂಗಾಯತರು, ಮುಸ್ಲಿಂ, ಹಿಂದುಳಿದವರು ಸೇರಿದಂತೆ ಇತರರ ವಿರುದ್ಧ ಎತ್ತಿ ಕಟ್ಟುವುದು ಮಹಾನಾಯಕನ ಕೆಲಸವಾಗಿದೆ. ಆದರೆ ನಾನು ಎಂದಿಗೂ ಯಾವುದೇ ಸಮಾಜದ ವಿರುದ್ಧ ಇಲ್ಲ. ನನಗೆ ಜಾತಿ ಭೇದ ಎನ್ನುವುದು ಗೊತ್ತಿಲ್ಲ. ಚುನಾವಣೆ ಬಂದಾಗ ಹೀಗೆ ಎತ್ತಿಕೊಟ್ಟುವುದೇ ಆತನ ಕೆಲಸವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಅವರು ಮತ್ತೆ ಕೆಂಡಕಾರಿದರು.

ಕಾಂಗ್ರೆಸ್ ಪಕ್ಷವನ್ನು ನಾನು ನೋಡಿಯೇ ಬಂದಿದ್ದೇನೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬಾರದು. ಭಾರತೀಯ ಜನತಾ ಪಕ್ಷ(ಬಿಜೆಪಿ) ಜನರಿಂದ ಮಾನ್ಯತೆ ಪಡೆದ ಪಕ್ಷ. ಅದೇ ರೀತಿ ಹಿಂದೆ ಕಾಂಗ್ರೆಸ್ ಪಕ್ಷವು ಜನರಿಂದ ಮಾನ್ಯತೆ ಪಡೆದಿತ್ತು. ಆದರೆ ಇಂದು ಕಾಂಗ್ರೆಸ್ ಪಕ್ಷ ಅಂತ ಸ್ಥಿತಿಯಲ್ಲಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 140 ಸ್ಥಾನ ಸಿಗಲೇಬೇಕು. ಮುಸಲ್ಮಾನರು, ಲಿಂಗಾಯತರು, ಹಿಂದುಳಿದವರು ಸೇರಿದಂತೆ ಎಲ್ಲಾ ವರ್ಗದವರು ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಅವರು ಮನವಿ ಮಾಡಿದರು. ಕಾಂಗ್ರೆಸ್ಸಿನ ಸುಳ್ಳು ಪ್ರಚಾರಕ್ಕೆ ಎಂದಿಗೂ ಬಲಿಯಾಗಬೇಡಿ. ಬಡವರು, ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದವರ ಸೇವೆಗೆ ಭಾರತೀಯ ಜನತಾ ಪಕ್ಷ ಸದಾ ಸಿದ್ಧವಿದೆ. ನೀವು ಈ ಬಾರಿ ನನಗೆ ಸಂಪೂರ್ಣವಾಗಿ ಆಶೀರ್ವಾದ ಮಾಡಬೇಕು ಎಂದು ಅವರು ಮನವಿ ಮಾಡಿದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

three − three =