ಚುನಾವಣೆ ಗಿಮಿಕ್ ಗಾಗಿ ಬಿಜೆಪಿ ಕಾರ್ಯಕಾರಿಣಿ: ಶಾಸಕಿ ಹೆಬ್ಬಾಳ್ಕರ ವಾಗ್ದಾಳಿ.
ಯುವ ಭಾರತ ಸುದ್ದಿ ಬೆಳಗಾವಿ: ಕೊರೊನಾ ಸಂಕಷ್ಟದಿಂದ ನಲುಗಿರುವ ರಾಜ್ಯದ ಜನತೆಯ ನೋವಿಗೆ ಸ್ಪಂದಿಸುವ ಬದಲು ಬಿಜಡಪಿ ಕಾರ್ಯಕಾರಿಣಿ ನಡೆಸಲು ಮುಂದಾಗಿದ್ದು, ಇದೊಂದು ಲೋಕಸಭೆ ಚುನಾವಣೆ ಗಿಮಿಕ್ ಆಗಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ವಾಗ್ದಾಳಿ ನಡೆಸಿದರು.
ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹದಿಂದ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ರಾಜ್ಯ ಸರಕಾರ ಎಷ್ಟು ಪರಿಹಾರ ವಿತರಣೆ ಮಾಡಿದೆ ಎಂಬುದನ್ನು ಶ್ವೇತ ಪತ್ರ ಹೊರಡಿಸಲಿ. ಬೆಳಗಾವಿಯಲ್ಲಿ ನಡೆಸುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆ ಇದು ಚುನಾವಣೆ ಗಿಮಿಕ್ ಆಗಬಾರದು. ಉತ್ತರ ಕರ್ನಾಟಕದ ಜನರ ಹಿತ ಕಾಪಾಡುವ, ನೀಡಿದ ಭರಸೆ ಈಡೇರಿಸಿದೆಯಾ ಎನ್ನುವ ಚರ್ಚೆಯೂ ನಡೆಯಲಿ ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ ಬಗೆ ಹರಿಸಲು ಶಕ್ತಿ ಸೌಧ ನಿರ್ಮಾಣ ಮಾಡಿದರೂ ರಾಜ್ಯದ ಬಿಜೆಪಿ ಸರಕಾರದ ಕಳೆದ ಎರಡು ಚಳಿಗಾಲದ ಅಧಿವೇಶನವನ್ನು ನಡೆಸದಿರುವುದು ದುರ್ದೈವದ ಸಂಗತಿ. ಕಳೆದ ಎರಡೂ ವರ್ಷದಿಂದ ಉತ್ತರ ಕರ್ನಾಟಕ ಪ್ರವಾಹದಿಂದ ರೈತರು, ಕೂಲಿ ಕಾರ್ಮಿಕರು, ವಾಹನ ಚಾಲಕರು ಸೇರಿದಂತೆ ಸಾಕಷ್ಟು ಜನರು ಸಂಕಷ್ಟ ಅನುಭವಿಸಿದ್ದಾರೆ ಎಂದರು.
ರಾಜ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಬೆಳಗಾವಿಯಲ್ಲಿ ನಡೆಸುತ್ತಿರುವುದಕ್ಕೆ ಅದನ್ನು ವಿರೋಧವನ್ನು ಮಾಡಲ್ಲ. ಸ್ವಾಗತಿಸುವುದಿಲ್ಲ. ಅದು ಅವರ ವಿಚಾರ. ಜನರ ಸಮಸ್ಯೆ ಆಲಿಸಲು ಬಿಜೆಪಿ ಸರಕಾರ ಸಿದ್ದವಿಲ್ಲ. ಚಳಿಗಾಲ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಸರಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದ ಲಾಕ್ ಡೌನ್ ನಿಂದ ಸಾಕಷ್ಟು ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ಸರಕಾರ ಭರವಸೆ ನೀಡಿತ್ತು. ಅದರಂತೆ ನಡೆದುಕೊಂಡಿದೆಯಾ ಎಂದು ಪ್ರಶ್ನಿಸಿದರು.
360 ಕೆರೆಗಳು ಒಡೆದು ಹಾಳಾಗಿವೆ. ಇಡೀ ರಾಜ್ಯದಲ್ಲಿ 15 ಸಾವಿರ ರಸ್ತೆಗಳು ಹಾಳಾಗಿವೆ., ಸೇತುವೆಗಳು ಹಾಳಾಗಿವೆ. ನನ್ನ ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆ ಹದಗೇಟ್ಟಿದೆ ಅದನ್ನು ಸರಿಪಡಿಸಲು ಹಣ ಕೊಡಿ ಎಂದರೆ ಉಡಾಫೆ ಉತ್ತರ ನೀಡುತ್ತಾರೆ. ಆದರೆ ಬೆಳಗಾವಿಯಲ್ಲಿ ಕಾರ್ಯಕಾರಣಿ ಸಭೆ ನಡೆಸಲು ಹಣ ಇದೆಯಾ ಎಂದು ಪ್ರಶ್ನಿಸಿದರು.