ಜಾನುವಾರುಗಳನ್ನು ಚರ್ಮಗಂಟು ರೋಗದಿಂದ ರಕ್ಷಿಸಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಿ -ಶಾಸಕ ಬಾಲಚಂದ್ರ ಜಾರಕಿಹೊಳಿ!!
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‍ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
ಯುವ ಭಾರತ ಸುುದ್ದಿ ಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು ರೋಗದಿಂದ ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚನೆ ನೀಡಿದರು.
ಗುರುವಾರದಂದು ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಚರ್ಮ ಗಂಟು ರೋಗ(ಲಂಪಿ ಸ್ಕಿನ್ ಡಿಸೀಜ್)ದ ಕಿಟ್‍ಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ವಿತರಿಸಿ ಮಾತನಾಡಿದ ಅವರು, ವೈದ್ಯಾಧಿಕಾರಿಗಳು ಜಾನುವಾರುಗಳ ಬಗ್ಗೆ ಆಲಕ್ಷ್ಯ ಮಾಡದೇ ಉತ್ತಮ ಚಿಕಿತ್ಸೆ ನೀಡಲು ಮುಂದಾಗುವಂತೆ ತಿಳಿಸಿದರು.
ಕಳೆದ ಹಲವಾರು ದಿನಗಳಿಂದ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದೆ. ರಾಜಸ್ಥಾನದಲ್ಲಿ ವ್ಯಾಪಕವಾಗಿ ಹರಡಿದ್ದು, ನಮ್ಮ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ಅಧಿಕ ಜಾನುವಾರುಗಳು ಈ ರೋಗದಿಂದ ಮೃತಪಟ್ಟಿವೆ. ನಮ್ಮಲ್ಲಿಯೂ ಸಹ 8 ಹಸುಗಳು ಕೂಡ ಮೃತಪಟ್ಟಿವೆ. ಕೊರೋನಾ ಮಾದರಿಯಂತೆ ಈ ರೋಗವು ಜಾನುವಾರುಗಳನ್ನು ಅಪ್ಪಳಿಸುತ್ತಿದೆ. ಲಂಪಿಸ್ಕಿನ್ ಡಿಸೀಜ್ ವೈರಸ್‍ನಿಂದ ಸಿಡುಬು ರೋಗ ಬರುತ್ತಿದೆ. ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕಚ್ಚುವ ಕೀಟಗಳಿಂದ ಕಲುಷಿತಗೊಂಡ ನೀರು, ಆಹಾರದಿಂದ ಜಾನುವಾರುಗಳ ನೇರ ಸಂಪರ್ಕದಿಂದ ರೋಗ ಹರಡುವಿಕೆ ಪ್ರತಿಶತ 10 ರಿಂದ 20 ರವರೆಗೆ ಮತ್ತು ರೋಗದ ಸಾವಿನ ಪ್ರಮಾಣ ಶೇ 5 ರಷ್ಟು ಇರುತ್ತದೆ ಎಂದು ಅವರು ಹೇಳಿದರು.
ಕೆಎಂಎಫ್ ಕೂಡ ಪಶು ಪಾಲನೆಯ ಅವಿಭಾಜ್ಯ ಅಂಗವಾಗಿರುವುದರಿಂದ ನಾವು ಸಹ ಈ ಚರ್ಮ ಗಂಟು ರೋಗದ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿಯೂ ಸಹ ಪಶು ವೈದ್ಯರು ಸೇವೆಯಲ್ಲಿದ್ದಾರೆ. ರೈತರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸವನ್ನು ಮಾಡಲು ಈಗಾಗಲೇ ಸೂಚಿಸಿದ್ದೇನೆ. ಅರಭಾವಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಚರ್ಮ ಗಂಟು ರೋಗದ ಕಿಟ್‍ಗಳನ್ನು ಸ್ವತಃ ನಾವೇ ನೀಡುತ್ತಿದ್ದೇವೆ. ರೈತರು ಜಾನುವಾರುಗಳ ಬಗ್ಗೆ ಜಾಗೃತಿಯಿಂದ ಇರಬೇಕು. ವೈದ್ಯರು ಸೂಚಿಸುವ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಲಂಪಿ ಸ್ಕಿನ್ ಡಿಸೀಜ್ ಬಗ್ಗೆ ಜಾಗೃತಿಯಿಂದ ಇರುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ಸಮುದಾಯಕ್ಕೆ ಮನವಿ ಮಾಡಿದರು.
ಕಿಟ್‍ನಲ್ಲಿ ಏನೇನಿದೆ? -ಅ್ಯಂಟಿಬಯೋಟಿಕ್, ಅ್ಯಂಟಿಹಿಸ್ಟೆಮಿಂಟ್ಸ್, ಅ್ಯಂಟಿಪೈರೋಟಿಕ್ಸ್, ಅನ್ಯಾಲಿ ಜಿ6, ಗಾಯ ಮಾಯುವ ಸ್ಪ್ರೇ, ಪಚನ ಕ್ರಿಯೆ ವೃದ್ಧಿಸುವ ಮಾತ್ರೆಗಳು, ಐವರ್ ಮೆಕ್ಟಿನ್ ಮಾತ್ರೆಗಳು.
ಈ ಸಂದರ್ಭದಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪಶು ಚಿಕಿತ್ಸಾಲಯ ಕೇಂದ್ರಗಳಿಗೆ ಉಚಿತವಾಗಿ ಕಿಟ್‍ಗಳನ್ನು ವಿತರಿಸಿದರು.
ಸಹಾಯಕ ಪಶು ನಿರ್ದೇಶಕ ಡಾ.ಮೋಹನ ಕಮತ, ಮೂಡಲಗಿ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎಂ.ಬಿ. ವಿಭೂತಿ, ಪಶು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.