ಜುಲೈ 7 ರಂದು ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ
ಯುವ ಭಾರತ ಸುದ್ದಿ ದಾವಣಗೆರೆ:
ಜುಲೈ 7 ರಂದು ರಾಜ್ಯ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜುಲೈ 3 ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ನಂತರ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್ ಅಧಿವೇಶನ ಬಗ್ಗೆ ಇನ್ನೂ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿಲ್ಲ. ಆದರೆ ಜುಲೈ 3 ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. ಒಂದು ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಬಳಿಕ ಜುಲೈ 7 ರಂದು ಬಜೆಟ್ ಮಂಡನೆ ಆಗಲಿದೆ ಎಂದರು.
ಬಜೆಟ್ ತಯಾರಿಕ ಸಭೆ ಇನ್ನೂ ಪ್ರಾರಂಭ ಆಗಿಲ್ಲ. ಬಿಜೆಪಿ ಸರ್ಕಾರ ಮಂಡಿಸಿರುವ ಈಗಿರುವ ಬಜೆಟ್ ಗಾತ್ರ 3,09,785 ಕೋಟಿ ರೂಪಾಯಿ ಇದೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ. 1964 ಆಕ್ಟ್ ಪ್ರಕಾರ, 12 ವರ್ಷ ಮೇಲ್ಟಟ್ಟ ವಯಸ್ಸಾಗಿರುವ ರಾಸುಗಳು, ಬರಡು ರಾಸುಗಳು ಹಾಗೂ ವ್ಯವಸಾಯಕ್ಕೆ ಉಪಯೋಗಕ್ಕೆ ಬಾರದ ರಾಸುಗಳು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ಏನೂ ತೀರ್ಮಾನ ಆಗಿಲ್ಲ ಎಂದರು.
ವಿದ್ಯುತ್ ದರ ಏರಿಕೆ ವಿಚಾರ
ವಿದ್ಯುತ್ ದರ ಏರಿಕೆ ಬಗ್ಗೆ ಮಾತನಾಡಿದ ಅವರು, ವಿದ್ಯುತ್ ದರದ ಬಗ್ಗೆ ನಾವು ತೀರ್ಮಾನ ಮಾಡುವುದಲ್ಲ. ಅದಕ್ಕೆ ಆರ್‌ಎಸಿ ಎಂಬ ಬೋರ್ಡ್ ಇದೆ. ಅವರೇ ನಿರ್ಧಾರ ಮಾಡುತ್ತಾರೆ, ಹಿಂದೆಯೇ ಆಗಿತ್ತು, ಈಗ ಅದು ಜಾರಿಯಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ಮತ್ತೆ ಸರಿಪಡಿಸಲು ಸಿದ್ದತೆ ಮಾಡಲು ತಿಳಿಸಿದ್ದೇನೆ. ಸಿಬ್ಬಂದಿಗಳ ಸಂಬಳ ಕೊಟ್ಟಿಲ್ಲವಾದರೆ, ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದರು.