ಎನ್‌ಪಿಎಸ್‌ನಲ್ಲಿ ಬದಲಾವಣೆಗೆ ಕೇಂದ್ರ ಚಿಂತನೆ, ಶೇ.45 ಪಿಂಚಣಿ ಸಿಗುವ ಸಾಧ್ಯತೆ

ಯುವ ಭಾರತ ಸುದ್ದಿ ದೆಹಲಿ:
ಸದ್ಯ ಜಾರಿಯಲ್ಲಿ ಇರುವ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)ಯಲ್ಲಿ ಕೆಲವೊಂದು ಬದಲಾವಣೆ ತರುವುದನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಪಡೆದಿರುವ ಕೊನೆಯ ಸಂಬಳದ ಶೇ.40ರಿಂದ ಶೇ.45ರಷ್ಟು ಮೊತ್ತವನ್ನು ಪಿಂಚಣಿಯಾಗಿ ನೀಡುವ ಬಗ್ಗೆ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.
ಪ್ರಸ್ತುತ ಮಾರುಕಟ್ಟೆ ಸಂಬಂಧಿತ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಪರಿಷ್ಕರಿಸಲು ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಅವರ ಕೊನೆಯ ವೇತನದ ಶೇಕಡಾ 40 ರಿಂದ 45 ರಷ್ಟು ಕನಿಷ್ಠ ಪಿಂಚಣಿ ಬಗ್ಗೆ ಪರಿಶೀಲಿಸಲು ಸರ್ಕಾರವು ಏಪ್ರಿಲ್‌ನಲ್ಲಿ ಸಮಿತಿಯನ್ನು ರಚಿಸಿದ ಈ ವರದಿ ಬಂದಿದೆ.
ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಹಲವಾರು ರಾಜ್ಯಗಳು ಮತ್ತು ಸರ್ಕಾರಿ ಒಕ್ಕೂಟಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಇದೇ ಬೇಡಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಹಲವು ಬಾರಿ ಪ್ರತಿಭಟನೆ, ಧರಣಿ ನಡೆಸಿದ್ದರು.
ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ಆಡಳಿತವಿರುವ ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಘೋಷಣೆ ಮಾಡಿರುವ ಬೆನ್ನಲ್ಲೇ ಕೇಂದ್ರದ ಹೊಸ ಚಿಂತನೆ ನಡೆದಿದೆ. ಹೀಗಾಗಿ ನಿಯಮದಲ್ಲಿ ಸ್ವಲ್ಪ ಬದಲಾವಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ. ಆದರೆ, ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಯಥಾವತ್ತಾಗಿ ಜಾರಿ ಮಾಡುವ ಸಾಧ್ಯತೆ ಇಲ್ಲ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
2004ರಲ್ಲಿ ಆಗ ಅಧಿಕಾರದಲ್ಲಿ ಇದ್ದ ಸರ್ಕಾರ ಜಾರಿಗೊಳಿಸಿದ್ದ ಪಿಂಚಣಿ ವ್ಯವಸ್ಥೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬದಲಾವಣೆಗೊಳಿಸಿತ್ತು. 2006ರಿಂದ ಸರ್ಕಾರಿ ಸೇವೆಗಳಿಗೆ ಸೇರಿದವರಿಗೆ ಪಿಂಚಣಿ ನೀಡದೇ ಇರುವ ಬಗ್ಗೆ ಆ ವ್ಯವಸ್ಥೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ವ್ಯವಸ್ಥೆಯ ಬಗ್ಗೆ ಹಲವಾರು ಆಕ್ಷೇಪಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಎನ್‌ಪಿಎಸ್ ವ್ಯವಸ್ಥೆ ಪರಿಶೀಲನೆಗೆ ಸಮಿತಿ ರಚನೆ ಮಾಡಿತ್ತು.
ಎನ್‌ಪಿಎಸ್‌ನಲ್ಲಿ ಉದ್ಯೋಗಿಗಳ ಮೂಲ ವೇತನದಿಂದ ಶೇ.10, ಸರ್ಕಾರದ ವತಿಯಿಂದ ಶೇ.14ನ್ನು ಪಿಂಚಣಿಗೆ ನೀಡಲಾಗುತ್ತಿದೆ. ಆದರೆ, ಹಳೆಯ ಪಿಂಚಣಿ ವ್ಯವಸ್ಥೆಯಲ್ಲಿ ಸರ್ಕಾರಿ ಉದ್ಯೋಗಿಗೆ ಕೊನೆಯ ಬಾರಿ ಪಡೆದುಕೊಂಡ ವೇತನದ ಮೊತ್ತದ ಶೇ.50ರಷ್ಟು ಪಿಂಚಣಿಯಾಗಿ ನೀಡಲಾಗುತ್ತದೆ.
YuvaBharataha Latest Kannada News