ವಿವಾಹವಾಗುವುದಾಗಿ ಮೋಸ : ಪಿಎಸ್ಐ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು !
ಯುವ ಭಾರತ ಸುದ್ದಿ ಬೆಳಗಾವಿ :
ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಕೆ ಮಾಡಿಕೊಂಡು ನಂತರ ಮತ್ತೊಬ್ಬಳನ್ನು ವಿವಾಹವಾಗಿ ಮೋಸ ಮಾಡಿರುವ ಬಗ್ಗೆ ಪಿಎಸ್ಐ ಮೇಲೆ ಶುಕ್ರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವಯರ್ಲೆಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಾಲ್ ಸಾಬ್ ನದಾಫ್(28) ಮೇಲೆ ಪ್ರಕರಣ ದಾಖಲಾಗಿದೆ. ರಾಮದುರ್ಗ ತಾಲೂಕಿನ ಯುವತಿ ಜತೆ ನದಾಫಗೆ 2020 ಜೂನ್ ನಲ್ಲಿ ಫೇಸ್ ಬುಕ್ ನಲ್ಲಿ ಪರಿಚಯವಾಗಿದೆ. ನಂತರ ಇಬ್ಬರ ನಡುವೆ ಪ್ರೇಮ ಕುದುರಿದೆ. ಈ ಸಂದರ್ಭದಲ್ಲಿ ಇಬ್ಬರೂ ದೂರದ ಸಂಬಂಧಿಗಳು ಎಂಬ ಅಂಶವು ಗೊತ್ತಾಗಿದೆ. ನಂತರ ಲಾಲ್ ಸಾಬ್ ಯುವತಿಯನ್ನು ಬೆಳಗಾವಿ ಸುಭಾಷ್ ನಗರದ ತನ್ನ ಕೊಠಡಿಗೆ ಕರೆದುಕೊಂಡು ಹೋಗಿ ಬಲತ್ಕರಿಸಿದ್ದಾನೆ. ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಮುಂತಾದಡೆ ಸುತ್ತಾಡಿದ್ದಾರೆ. ಆಗ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿ ದೈಹಿಕವಾಗಿ ಸಂಪರ್ಕ ಸಾಧಿಸಿದ್ದಾನೆ. ಇಬ್ಬರ ವಿಷಯ ಮನೆಯವರಿಗೆ ತಿಳಿದಿದ್ದರಿಂದ ಹಿರಿಯರ ಸಮ್ಮುಖದಲ್ಲಿ ವಿವಾಹವಾಗುವುದಾಗಿ ಲಾಲ್ ಸಾಬ್ ನದಾಫ್ ಬಾಂಡ್ ಮೂಲಕ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದ.
ಹಲವಾರು ಸಲ ನಮ್ಮಿಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ. ನನ್ನನ್ನು ಪತ್ನಿ ಎಂದೇ ಸಂಬೋಧಿಸುತ್ತಿದ್ದ. ನಾನು ಧೈರ್ಯದಿಂದ ಇದ್ದೆ. ಆತ ವಿವಾಹವಾಗುವುದಾಗಿ ಭರವಸೆ ನೀಡಿದ್ದ.
ಈ ಬಗ್ಗೆ ಕಳೆದ 15 ದಿನಗಳ ಹಿಂದೆ ಲಾಲ್ ಸಾಬ್ ಅವರ ಅಣ್ಣ ಮಹಮ್ಮದ್ ನದಾಫ್ ಅವರಿಗೆ ಕರೆ ಮಾಡಿದಾಗ ಲಾಲ್ ಸಾಬ್ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ. ಆರೋಗ್ಯ ಸುಧಾರಿಸುವರಿಗೆ ಸಮಯ ಕೊಡಿ ಎಂದು ಹೇಳಿದ್ದ.
ಆದರೆ, ನಂತರದ ದಿನಗಳಲ್ಲಿ ಲಾಲ್ ಸಾಬನನ್ನು ಪ್ರಶ್ನಿಸಿದರೆ ನಾನು ನಿನ್ನನ್ನು ವಿವಾಹವಾಗುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳು ಎಂದು ಹೇಳಿ ನನ್ನೊಂದಿಗೆ ಸಂಪರ್ಕ ಬಿಟ್ಟಿದ್ದಾನೆ.
ಈ ನಡುವೆ ಫೆಬ್ರವರಿ 16ರಂದು ಆತ ಮತ್ತೊಬ್ಬಳ ಜತೆ ವಿವಾಹವಾಗಿದ್ದು ತನಗೆ ಮೋಸ ಮಾಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ಎಸಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಪೊಲೀಸ್ ಮೊರೆ ಹೋಗಿದ್ದಾಳೆ. ಇದೀಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾಳೆ.