ಹಿಂದೂ ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ : ಡಾ. ಗಜಾನನ ನಾಯಕ
ಯುವ ಭಾರತ ಸುದ್ದಿ ಬೆಳಗಾವಿ :
ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ತಮ್ಮದೇ ಆದ ಯುದ್ಧ ತಂತ್ರದಿಂದ ಹಾಗೂ ಗೆರಿಲ್ಲಾ ಯುದ್ಧ ಮಾದರಿ ಮೂಲಕ ನಮ್ಮ ದೇಶವನ್ನು ಹಿಂದೂ ಸಾಮ್ರಾಜ್ಯ, ಸ್ವರಾಜ್ಯ ಸಾಮ್ರಾಜ್ಯವನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದವರು. ಹಿಂದೂ ಸಾಮ್ರಾಜ್ಯ, ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರಗಳ ರಕ್ಷಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ಸಹಾಯಕ ಪ್ರಾಧ್ಯಾಪಕ ಡಾ. ಗಜಾನನ ನಾಯಕ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನರ ಪಾಲಿಕೆಯ ವತಿಯಿಂದ ಭಾನುವಾರ ನಗರದ ಶಿವಾಜಿ ಉದ್ಯಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ದೇಶದ ದೇವಾಲಯಗಳನ್ನು ಸಂಸ್ಕೃತಿಯನ್ನು ಧಾರ್ಮಿಕ ಕೇಂದ್ರಗಳನ್ನು ಬೇರೆಯವರ ದಾಳಿಗೆ ತುತ್ತಾಗದಂತೆ ರಕ್ಷಣೆ ಮಾಡುವ ಮೂಲಕ ಮಹಾಸಂಕಲ್ಪ ಮಾಡಿದವರು ಶಿವಾಜಿ ಮಹಾರಾಜರು ಎಂದರು.
ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮಗೆ ರಾಮಾಯಣ ಮತ್ತು ಮಹಾಭಾರತಗಳ ಬಗ್ಗೆ ಸಾಮಾನ್ಯ ಜ್ಞಾನ ಇರಬೇಕು.
ಈ ದೇಶದ ರಾಜಕೀಯ ಮತ್ತು ಆಧ್ಯಾತ್ಮಿಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಬುದ್ಧ, ಬಸವ, ಅಂಬೇಡ್ಕರ್, ಶಿವಾಜಿ, ಗಾಂಧೀಜಿ, ಸ್ವಾಮಿ ವಿವೇಕಾನಂದ ಇಂತಹ ಮಹಾನ್ ಚೇತನರ ಚರಿತ್ರೆ ಬಗ್ಗೆ ನಮಗೆ ಅರಿವಿರಬೇಕು ಎಂದು ಹೇಳಿದರು
ಇವತ್ತು ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಶಿವಾಜಿಯವರ ಚರಿತ್ರೆ ತುಂಬಾ ವಿಶೇಷ. ಛತ್ರಪತಿ ಶಿವಾಜಿ ಮಹಾರಾಜರವರ ಜಯಂತಿ ಮಾಡುವ ಮೂಲಕ ಅದರ ಜೊತೆ ಜೊತೆಗೆ ಅವರ ಜೀವನವನ್ನು ಬದುಕಿನ ಪಯಣವನ್ನು ಸಾಧನೆಯನ್ನ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಮನೆಯ ಮಕ್ಕಳಿಗೆ, ಸುತ್ತಮುತ್ತಲಿನ ಜನರಿಗೆ ತಿಳಿಸುವಂತಹ ಪ್ರಯತ್ನ ಮಾಡಿದರೆ ಅದು ನಿಜವಾದ ಜಯಂತಿಯಾಗುವುದು ಎಂದು ಡಾ. ಗಜಾನನ ನಾಯಕ ಅಭಿಪ್ರಾಯಪಟ್ಟರು.
ಮೇಯರ್ ಶೋಭಾ ಸೋಮನಾಚೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ ಮೇಯರ್ ರೇಷ್ಮಾ ಪಾಟೀಲ, ವಿದ್ಯಾವತಿ ಭಜಂತ್ರಿ, ನಗರಸೇವಕರಾದ ವಾಣಿ ಜೋಶಿ, ಸಾರಿಕಾ ಪಾಟೀಲ, ಪ್ರೀತಿ ಕಾಮಕರ, ಗಿರೀಶ ಧೋಂಗಡಿ, ಅಂಜಲಿ ಪಾಟೀಲ ಉಪಸ್ಥಿತರಿದ್ದರು.
ಭಾವಚಿತ್ರದ ಭವ್ಯ ಮೆರವಣಿಗೆ:
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಅಂಗವಾಗಿ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಮೆರವಣಿಗೆಗೆ ಸಂಸದೆ ಮಂಗಳಾ ಅಂಗಡಿ ಹಾಗೂ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಮೇಯರ್ ಶೋಭಾ ಸೋಮನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ,ರುದ್ರೇಶ ಗಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.