Breaking News

ಬಸವೋತ್ತರ ಶರಣರ ಕೊಡುಗೆ ಅನನ್ಯ : ಡಾ. ಬಿ.ಟಿ.ಚೇತನ

Spread the love

ಬಸವೋತ್ತರ ಶರಣರ ಕೊಡುಗೆ ಅನನ್ಯ : ಡಾ. ಬಿ.ಟಿ.ಚೇತನ

ಬೆಳಗಾವಿ :
12 ನೇ ಶತಮಾನದಲ್ಲಿ ಇಡೀ ಭಾರತ ಖಂಡದಲ್ಲಿಯೇ ಅಪ್ರತಿಮ ಕ್ರಾಂತಿಗೈದ ಬಸವಾದಿ ಶಿವಶರಣರ ತತ್ವಾದರ್ಶಗಳು ಈ 21 ನೇ ಶತಮಾನದಲ್ಲಿಯೂ ಪ್ರಸ್ತುತವಾಗಿವೆ. ಅವರ ತತ್ವಗಳನ್ನು ಇಂದಿನ ಸಮಾಜಕ್ಕೆ ಮುಟ್ಟಿಸುವಲ್ಲಿ ಅನೇಕ ಶರಣರ ತ್ಯಾಗ ಪರಿಶ್ರಮವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಕಣಕುಂಬಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ.ಟಿ.ಚೇತನ ಹೇಳಿದರು.
ಬೆಳಗಾವಿ ಜಿಲ್ಲಾ ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯನ್ನುದ್ದೇಶಿಸಿ ಬಸವೋತ್ತರ ಕಾಲದ ಶರಣರ ಕ್ರಾಂತಿ ವಿಷಯ ಕುರಿತು ಮಾತನಾಡಿದರು.

12 ರಿಂದ 15 ನೇ ಶತಮಾನದಲ್ಲಿ ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ, ವಿಜಯನಗರದ ಅರಸ ಪ್ರೌಢದೇವರಾಯ ಬಸವ ತತ್ವ ಪ್ರಸಾರದಲ್ಲಿ ಮಹತ್ತರ ಕಾರ್ಯ ಮಾಡಿದ್ದಾರೆ. ಅದರಂತೆಯೇ 15 ನೇ ಶತಮಾನದಲ್ಲಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಅಳಿವಿನಂಚಿನಲ್ಲಿದ್ದ ಶರಣ ಪರಂಪರೆ ಮತ್ತು ಸಂಸ್ಕೃತಿಯನ್ನು ಪುನರುತ್ಥಾನ ಮಾಡಿದ್ದಾರೆ. ಅದೇ ಕಾಲಮಾನದಲ್ಲಿ ಆಗಿ ಹೋದ ಶ್ರೀ ಮುಪ್ಪಿನ ಷಡಕ್ಷರಿಗಳು, ಶ್ರೀ ನಿಜಗುಣ ಶಿವಯೋಗಿಗಳು, ಶ್ರೀ ಷಣ್ಮುಖ ಸ್ವಾಮಿಗಳು ಮತ್ತು ಇತರರು ಕೈವಲ್ಯಕ್ಕೆ ತಮ್ಮದೇ ಆದ ಭಾಷ್ಯವನ್ನು ಬರೆದು ಶರಣ ಸಾಹಿತ್ಯವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. 18 ನೇ ಶತಮಾನದಲ್ಲಿ ಕಡಕೊಳದ ಶ್ರೀ ಮಡಿವಾಳ ಶಿವಯೋಗಿಗಳು, ಶ್ರೀ ಸರ್ಪಭೂಷಣ ಶಿವಯೋಗಿಗಳು, ಶ್ರೀ ಘನಮಠದಾರ್ಯರು, ಶ್ರೀ ಬಾಲಲೀಲ ಮಹಾಂತ ಶಿವಯೋಗಿಗಳು, ಮೈಲಾರಾದ ಶ್ರೀ ಬಸವಲಿಂಗ ಶರಣರ ಅನನ್ಯ ಕೊಡುಗೆಯೇ ಇಂದಿನ ವೀರಶೈವ ಲಿಂಗಾಯತ ಸಮಾಜದ ಭದ್ರಬುನಾದಿಯಾಗಿದೆ. ಅದರಂತೆ ಇಂದು ನಮ್ಮ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಮತ್ತು ನೈತಿಕವಾಗಿ ಶ್ರೀಮಂತವಾಗಿದೆ ಎಂದರೆ ಅದಕ್ಕೆ ಕಾರಣ 19-20ನೇ ಶತಮಾನದಲ್ಲಿ ಆಗಿ ಹೋದ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು, ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು, ಧಾರವಾಡದ ಶ್ರೀ ಮೃತ್ಯಂಜಯ ಅಪ್ಪಗಳು, ಡಾ. ಫ. ಗು. ಹಳಕಟ್ಟಿಯವರು, ಶಿರಸಂಗಿಯ ಲಿಂಗರಾಜ ದೇಸಾಯಿಯವರು, ಚಿತ್ರದುರ್ಗದ ಜಯದೇವ ಜಗದ್ಗುರುಗಳು, ಪಂ. ಪಂಚಾಕ್ಷರಿ ಗವಾಯಿಗಳು, ಸಿದ್ದಗಂಗೆಯ ಶ್ರೀ ಶಿವಕುಮಾರ ಶಿವಯೋಗಿಗಳು ಇತ್ಯಾದಿ ಅನೇಕಾನೇಕ ಮಹಾತ್ಮರ ದಿವ್ಯದೃಷ್ಟಿ, ಕಾರ್ಯಕ್ಷಮತೆ, ಸೇವೆ ಮತ್ತು ಸಾಮಾಜಿಕ ಕ್ರಾಂತಿಯ ಸಲುವಾಗಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಈ ಎಲ್ಲ ಮಹಾತ್ಮರ ಅನನ್ಯ ಪರಿಶ್ರಮದ ಫಲವೇ ಇಂದಿನ ಸದೃಢವಾದ ಶರಣ ಪರಂಪರೆಯ ವೀರಶೈವ ಲಿಂಗಾಯತ ಸಮಾಜ ರೂಪಗೊಳ್ಳಲು ಸಾಧ್ಯವಾಯಿತೆಂದು ಹೇಳಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರತ್ನಪ್ರಭಾ ಬೆಲ್ಲದ ಮಾತನಾಡಿ, ಬಸವಾದಿ ಪ್ರಮಥರ ವಿಚಾರಗಳನ್ನು ನೂರಾರು ವರ್ಷಗಳ ವರೆಗೆ ಅತ್ಯಂತ ನಿಷ್ಠೆಯಿಂದ ಅನೇಕ ಪುಣ್ಯಪುರುಷರು, ಕವಿಗಳು, ಮಠಾಧೀಶರು ಮುಂದುವರೆಸಿಕೊಂಡು ಹೋದ ಫಲವೇ ನಾವಿಂದು ನಾಡಿನಲ್ಲಿ ಬಹುದೊಡ್ಡ ಸಮಾಜವಾಗಿ ರೂಪಗೊಂಡಿದ್ದೇವೆ. ಮಹಾಸಭೆಯು ಸಮಾಜ ಸಂಘಟನೆಯಲ್ಲಿ ಮಹತ್ತರ ಕೊಡುಗೆಯನ್ನು ನೀಡುತ್ತಾ ತನ್ನ ರಚನಾತ್ಮಕವಾದ ಕಾರ್ಯಗಳನ್ನು ನೆರವೇರಿಸುತ್ತಾ ಬಂದಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ‘ನವ ಸಮಾಜಕ್ಕೆ ಹಿಂದಿನ ಅನೇಕ ಮಹಾಂತರ ಕೊಡುಗೆ ಅನುಪಮವೆನಿಸಿದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಹಗಲಿರುಳು ಶ್ರಮಿಸಿ ಸಮಾಜವನ್ನು ಸುಶಿಕ್ಷಿತರನ್ನಾಗಿ ಮಾಡಿದರು. ಶಿಕ್ಷಣದಿಂದ ಮಾತ್ರ ಆರ್ಥಿಕ ಸಬಲತೆಯನ್ನು ಪಡೆಯಲು ಸಾಧ್ಯವೆಂದು ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮಠಮಾನ್ಯಗಳು, ಪುಣ್ಯಪುರುಷರು ಶ್ರಮಿಸಿದರು ಎಂದು ನುಡಿದರು.
ಆರಂಭದಲ್ಲಿ ಕುಮಾರ ಸಿದ್ಧಾರ್ಥ ಎಸ್ ಹಂಜಿ ವಚನ ಪ್ರಾರ್ಥನೆ ಮಾಡಿದರು. ಹೇಮಾ ಭರಭರಿ ವಚನ ವಿಶ್ಲೇಷಣೆ ಮಾಡಿದರು. ಸುಮಿತ್ರ ಪರಿಚಯಿಸಿದರು. ಸುರೇಖಾ ಮಾನ್ವಿ ಸ್ವಾಗತಿಸಿದರು. ಭಾರತಿ ರತ್ನಪ್ಪಗೋಳ ವಂದಿಸಿದರು. ಪವಿತ್ರಾ ಅಮಾಸಿ ನಿರೂಪಿಸಿದರು. ಡಾ.ಎಚ್.ಬಿ.ರಾಜಶೇಖರ, ಡಾ.ಎಫ್.ವ್ಹಿ.ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣನವರ, ಸಿ.ಎಸ್.ಹುಲಿಕಂಠಿಮಠ, ನ್ಯಾಯವಾದಿ ವ್ಹಿ.ಕೆ.ಪಾಟೀಲ, ಆಶಾ ಯಮಕನಮರಡಿ ಅನೇಕ ಉಪಸ್ಥಿತರಿದ್ದರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

nine − 2 =