5.15 ಲಕ್ಷ ರೂ.ಗೆ ಕಿಲಾರಿ ಹೋರಿ ಮಾರಾಟ!
ಯುವ ಭಾರತ ಸುದ್ದಿ, ಚಿಕ್ಕೋಡಿ: ಮನೆಯಲ್ಲಿ ಸಾಕಿ, ಬೆಳೆಸಿದ, ಕೃಷಿ ಚಟುವಟಿಕೆಯಲ್ಲಿ ರೈತನ ಹೆಗಲಿಗೆ ನಿಂತು ಕೆಲಸ ಮಾಡಿ ಬೆವರು ಸುರಿಸಿದ ತಮ್ಮ ಕಿಲಾರಿ ಹೋರಿ ದಾಖಲೆ ಬೆಲೆಗೆ ಮಾರಾಟವಾಗಿದ್ದಕ್ಕೆ ರೈತ ಖುಷಿಯಲ್ಲಿ ತೇಲಾಡುತ್ತಿದ್ದು,
ಮನೆ ಮುಂದೆ ಮಂಟಪ ಹಾಕಿಸಿ ಸುಮಂಗಲೆಯರಿಂದ ಆರತಿ ಬೆಳಗಿಸಿ, ತವರು ಮನೆಯಿಂದ ಮಗಳ ಕಳಿಸಿಕೊಡುವ ರೀತಿ ವಾದ್ಯಮೇಳಗಳೊಂದಿಗೆ ಮಹಾರಾಷ್ಟ್ರಕ್ಕೆ ಬಿಳ್ಕೋಟ್ಟರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಸಮೀಪ ಕುರುಬಗೋಡಿಯ ರೈತ ಅಡಿವೆಪ್ಪ ಪದ್ಮಣ್ಣ ಕುರಿ ಎಂಬವರು ತಾವು ಸಾಕಿದ್ದ 16 ತಿಂಗಳ ಕಿಲಾರಿ ಹೋರಿಯನ್ನು ಬರೋಬ್ಬರಿ 5.15 ಲಕ್ಷ ರೂ.ಗೆ ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.
5.15 ಲಕ್ಷ ರೂ. ದಾಖಲೆ ಬೆಲೆಗೆ ಮಾರಾಟ:
ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಮಂಗಳವೇಡಾ ತಾಲೂಕಿನ ನಂದೇಶ್ವರ ಗ್ರಾಮದ ದತ್ತಾ ಜ್ಞಾನೋಬಾ ಕರಡೆ ಅವರಿಗೆ ಉತ್ತಮ ಕಿಲಾರಿ ಜಾತಿಯ 16 ತಿಂಗಳ ಹೋರಿಯನ್ನು 5.15 ಲಕ್ಷ ರೂ.ಗೆ ಮಾರಾಟ ಮಾಡಲಗಿದೆ.
ತಮ್ಮ ಹೋರಿ ದಾಖಲೆ ಬೆಲೆಗೆ ಮಾರಾಟ ಆಗಿರುವುದರಿಂದ, ಮನೆ ಮುಂದೆ ಮಂಟಪ ಹಾಕಿಸಿ ಸುಮಂಗಲಿಯರಿಂದ ಆರತಿ ಪೂಜೆ ಮಾಡಿಸಿ ತವರು ಮನೆಯಿಂದ ಮಗಳನ್ನು ಕಳಿಸಿಕೊಡುವ ರೀತಿ ವಾದ್ಯಮೇಳಗಳೊಂದಿಗೆ ಮಹಾರಾಷ್ಟ್ರಕ್ಕೆ ಕಿಲಾರಿ ಹೋರಿಯನ್ನು ಬಿಳ್ಕೋಟ್ಟರು. ಈ ದಾಖಲೆ ಬೆಲೆಯ ಹೋರಿ ನೋಡಲು ನೂರಾರು ರೈತರು, ಸಾರ್ವಜನಿಕರು ಅಲ್ಲಿಗೆ ಆಗಮಿಸಿದ್ದರು.
2020ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಭಾರತ ಸುಪ್ರಸಿದ್ಧ ಚಿಂಚಲಿ ಮಾಯಕ್ಕಾ ದೇವಿ ಜಾತ್ರೆಯಲ್ಲಿ 6 ತಿಂಗಳ ಈ ಕಿಲಾರಿ ಹೊರಿಯನ್ನು 1.1 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದೆವು. ಅದನ್ನು ನಮ್ಮ ಮಕ್ಕಳಂತೆ ನೋಡಿಕೊಂಡು ಪ್ರತಿ ದಿನ ಹಾಲು, ಬಾಳೆಹಣ್ಣು, ಗೋಧಿ, ಕಡಲೆ ಇನ್ನಿತರೆ ಪೌಷ್ಠಿಕ ಆಹಾರವನ್ನು ಹಾಕಿ ಪೋಷಿಸಿದ್ದೇವೆ. 10 ತಿಂಗಳಲ್ಲಿ ಈ ಕಿಲಾರಿ ಹೋರಿಯು 5.15 ಲಕ್ಷಕ್ಕೆ ಮಾರಾಟವಾಗಿದೆ ಎಂದು ಅಡಿವೆಪ್ಪ ತಿಳಿಸಿದ್ದಾರೆ.