ರಾಜ್ಯಸಭೆ ಚುನಾವಣೆಗೆ ದಿನ ನಿಗದಿ
ದೆಹಲಿ:
ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿದಂತೆ ರಾಜ್ಯಸಭೆಯ 10 ಸದಸ್ಯರು ಜುಲೈ, ಆಗಸ್ಟ್‌ನಲ್ಲಿ ನಿವೃತ್ತಿಯಾಗುತ್ತಿದ್ದು, ಆ ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ಗೋವಾದಿಂದ ಒಬ್ಬರು, ಗುಜರಾತ್‌ನಿಂದ ಮೂವರು, ಪಶ್ಚಿಮ ಬಂಗಾಳದಿಂದ ಆರು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.
ಗುಜರಾತ್‌ನಿಂದ ಆಯ್ಕೆಯಾಗಿದ್ದ ಬಿಜೆಪಿಯ ಜೈಶಂಕರ್, ದಿನೇಶ್‌ಚಂದ್ರ ಜೆಮಲ್‌ಭಾಯ್ ಅನವದೀಯ, ಲೋಖಂಡವಾಲಾ ಜುಗಲ್ ಸಿನ್ಹಾ ಮಾಥೂರ್‌ಜಿ ಹಾಗೂ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿದ್ದ ತೃಣಮೂಲ ಕಾಂಗ್ರೆಸ್‌ನ ಡೆರ್ರೆಕ್ ಒ ಬ್ರಿಯಾನ್, ಡೊಲಾ ಸೆನ್, ಪ್ರದೀಪ್ ಭಟ್ಟಾಚಾರ್ಯ, ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ, ಶಾಂತಾ ಛೆಟ್ರಿ ಅವರ ಅವಧಿ ಆ.18ಕ್ಕೆ ಮುಗಿಯಲಿದೆ.
ಗೋವಾದಿಂದ ಆಯ್ಕೆಯಾಗಿರುವ ಬಿಜೆಪಿ ಎಂಪಿ ವಿನಯ್ ಡಿ. ತೆಂಡೂಲ್ಕರ್ ಅವರ ಅವಧಿಯು ಜುಲೈ 28ಕ್ಕೆ ಅಂತ್ಯವಾಗಲಿದೆ.
ಅಲ್ಲದೆ, ತೃಣಮೂಲ ಕಾಂಗ್ರೆಸ್‌ನ ಲುಜಿನ್ಹೊ ಫಲೆರೊ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಜುಲೈ 24ರಂದೇ ಉಪ ಚುನಾವಣೆ ನಡೆಯಲಿದೆ. ಅವರ ಅಧಿಕಾರವಧಿ ಏಪ್ರಿಲ್ 2026ರವರೆಗೂ ಇತ್ತು. ಕೆಲ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದರು.
ಈ ಸ್ಥಾನಗಳ ಭರ್ತಿಗೆ ಜುಲೈ 6ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳ ಸಲ್ಲಿಕೆಗೆ ಜುಲೈ 13 ಕಡೆಯ ದಿನವಾಗಿದ್ದು, ವಾಪಸಾತಿಗೆ ಜುಲೈ 17 ಕಡೆಯದಿನ. ಮತದಾನ ಜುಲೈ 24ರಂದು ನಡೆಯಲಿದೆ.