ಚುನಾವಣೆ : 9 ದಿನದಲ್ಲಿ ₹27.38 ಕೋಟಿ ನಗದು, 25 ಕೆಜಿ ಚಿನ್ನ ವಶ
ಯುವ ಭಾರತ ಸುದ್ದಿ ಬೆಂಗಳೂರು:
ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ಬೆನ್ನಿಗೇ ಹಲವೆಡೆ ಸಾಗಾಟ ಮಾಡುತ್ತಿದ್ದ ಅಕ್ರಮ ಹಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಅಧಿಕಾರಿಗಳು ಮಾರ್ಚ್ 29 ರಿಂದ ಏಪ್ರಿಲ್ 6 ವರೆಗೆ ರಾಜ್ಯಾದ್ಯಂತ 27.38 ಕೋಟಿ ರೂ. ನಗದು ವಶಕ್ಕೆ ಪಡೆದಿದ್ದಾರೆ. 26.38 ಕೋಟಿ ಮೌಲ್ಯದ ಮದ್ಯ, 87.90 ಸಾವಿರ ಮೌಲ್ಯದ 131 ಕೆ.ಜಿ ಮಾದಕ ವಸ್ತು, 9.87 ಕೋಟಿ ರೂ.ಮೌಲ್ಯದ 25 ಕೆ.ಜಿ ಚಿನ್ನ, 135 ಕೆ.ಜಿ ಬೆಳ್ಳಿ, ಕುಕ್ಕರ್, ಸೀರೆ ಸೇರಿದಂತೆ 12.48 ಕೋಟಿ ರೂ. ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 77 ಕೋಟಿ 93 ಲಕ್ಷ ನಗದು, ವಸ್ತುಗಳು, ಚಿನ್ನಾಭರಣ, ಲಿಕ್ಕರ್ ಸೀಜ್ ಮಾಡಲಾಗಿದೆ.
ಧಾರವಾಡ ತಾಲೂಕಿನ ತೇಗೂರು ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ನಲ್ಲಿ 710 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ.
ಗದಗ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ನಲ್ಲೂ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.45 ಕೋಟಿ ರೂ.ಗಳ ಹಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ದುಂದೂರು ಚೆಕ್ ಪೋಸ್ಟ್ನಲ್ಲಿ ಅಣ್ಣಿಗೇರಿಯಿಂದ ಗದಗಕ್ಕೆ ಸಾಗಿಸುತ್ತಿದ್ದ 561 ಸೀರೆ ಸೀಜ್ ಮಾಡಿದ್ದಾರೆ. ಜೊತೆಗೆ ಹುಬ್ಬಳ್ಳಿ ಯಿಂದ ಬರ್ತಿದ್ದ 100 ಗ್ಯಾಸ್ ಸ್ಟವ್ಗಳನ್ನ ಜಪ್ತಿ ಮಾಡಲಾಗಿದೆ.
ಚಿಕ್ಕೋಡಿಯ ಕುಗನೋಳಿ ಚೆಕ್ ಪೋಸ್ಟ್ನಲ್ಲಿ ತಪಾಸಣೆ ವೇಳೆ 1.5 ಕೋಟಿ ಹಣ ಪತ್ತೆಯಾಗಿದೆ. ಮಹಾರಾಷ್ಟ್ರದ ಮುಂಬೈನಿಂದ ರಾಜ್ಯಕ್ಕೆ ಆಗಮಿಸುತ್ತಿದ್ದ ಬಸ್ನಲ್ಲಿ ಹಿರೇಬಾಗೇವಾಡಿ ಚೆಕ್‌ಪೋಸ್ಟ್‌ನಲ್ಲಿ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ವಶಕ್ಕೆ ಪಡೆದಿದ್ದಾರೆ.