Breaking News

ಜನಾಂಗೀಯ ನಾಡಿ ಮಿಡಿತವೇ ಸಾಹಿತ್ಯ: ಸರ್ವಾಧ್ಯಕ್ಷ ಈರಣ್ಣ ಬೆಕಿನಾಳ

Spread the love

ಜನಾಂಗೀಯ ನಾಡಿ ಮಿಡಿತವೇ ಸಾಹಿತ್ಯ: ಸರ್ವಾಧ್ಯಕ್ಷ ಈರಣ್ಣ ಬೆಕಿನಾಳ

ಯುವ ಭಾರತ ಸುದ್ದಿ ಬಸವನಬಾಗೇವಾಡಿ: ಸಾಹಿತ್ಯವೆಂದರೆ ಬರಿ ಪಾಂಡಿತ್ಯವಲ್ಲ. ಅದು ಜನಾಂಗೀಯ ನಾಡಿ ಮಿಡಿತ. ಜನರಾಡುವ ಭಾಷೆಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವ ಭಾಷೆಯ ಪ್ರತೀಕ ಹಾಗೂ ಸಂವೇದನಾಶೀಲ ಮಾಧ್ಯಮವಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಈರಣ್ಣ ಬೆಕಿನಾಳ ಹೇಳಿದರು.
ತಾಲ್ಲೂಕಿನ ಮನಗೂಳಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಹಾಗೂ ಕನ್ನಡ ಹೆಣ್ಣು ಮಕ್ಕಳ ಶಾಲೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವನಬಾಗೇವಾಡಿ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ರಾಜ್ಯದ ಗಡಿ ವಿವಾದಗಳು ಇನ್ನೂ ಬಗೆಹರಿದಿಲ್ಲ. ಕನ್ನಡಪರವಾಗಿ ಬಂದ ವರದಿಗಳು ಕಾರ್ಯರೂಪಕ್ಕೆ ಬಂದಿಲ್ಲ. ಯಾವ ಭಾಷೆಯು ಇನ್ನೊಂದು ಭಾಷೆಯನ್ನು ಅಳಿಸಿಹಾಕಲು ಪ್ರಯತ್ನಿಸಬಾರದು. ವೈಚಾರಿಕ ಚಿಂತನೆಗಳೊಂದಿಗೆ ವೈಜ್ಞಾನಿಕ ಬರಹದಲ್ಲಿ ತೊಡಗಿಸಿಕೊಳ್ಳುವಲ್ಲಿ ಈ ಭಾಗದ ಲೇಖಕರು ಹೆಚ್ಚಿನ ಆಸಕ್ತಿ ವಹಿಸಿಕೊಳ್ಳಬೇಕು. ಓದುಗರು ಲೇಖಕರ ಪುಸ್ತಕ ಕೊಂಡು ಓದುವ ಮೂಲಕ ಲೇಖಕರನ್ನು ಪ್ರೋತ್ಸಾಹಿಸಿ ಆರ್ಥಿಕ ಮುಗ್ಗಟ್ಟಿನಿಂದ ಪಾರು ಮಾಡಬೇಕು ಎಂದು ಹೇಳಿದರು.
ಕನ್ನಡ ಅಂಕಿಗಳನ್ನು ತುಂಬಾ ಅಲಕ್ಷ ಮಾಡುತ್ತಿದ್ದೇವೆ. ಇನ್ನು ಕೆಲವೇ ವರ್ಷಗಳಲ್ಲಿ ಅಂಕಿಗಳು ಮಾಯವಾಗುತ್ತವೆ ಎಂದು ವರದಿಗಳು ಹೇಳುತ್ತವೆ. ಕನ್ನಡದ ಅಂಕಿಗಳು ನಮ್ಮ ಹೃದಯದಲ್ಲಿ ವಿರಾಜಮಾನವಾಗಬೇಕು. ಅವುಗಳನ್ನು ನಿರಂತರವಾಗಿ ಬಳಕೆ ಮಾಡುವಂತಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸಲು ಶಿಕ್ಷಣ ವಲಯದಲ್ಲಿ ಮಹತ್ವದ ಪ್ರಯೋಗಗಳು ಆಗಬೇಕಿದೆ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಭಾಷೆಗೆ ಮನುಷ್ಯನ ಏಳಿಗೆ ಮಾಡುವ ಸಾಮರ್ಥ್ಯವಿದೆ. ನಾಡಿನಲ್ಲಿ ಜನರು ಸುಭಿಕ್ಷೆಯಿಂದ ಬದುಕಬೇಕಾದರೆ ಒಂದು ಭಾಷೆಯ ಅಗತ್ಯತೆ ಇದೆ. ನಮ್ಮ ದೇಶದಲ್ಲಿ ಬಹುಭಾಷೆ, ಬಹು ಸಂಸ್ಕೃತಿ ಇದೆ. ದೇಶದಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದ ನಂತರ ಆಯಾ ರಾಜ್ಯದಲ್ಲಿ ಆಯಾ ಭಾಷೆಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಪ್ರತಿಯೊಬ್ಬರಿಗೂ ಮಾತೃಭಾಷೆ ಆಶ್ರಯ ತಾಣವಾಗಿದೆ. ಮಾತೃಭಾಷೆಯಿಂದ ಯಶಸ್ಸು ಸಾಧಿಸಲು ಸಾಧ್ಯ. ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಮಾತನಾಡಿ, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನಡೆಯುವ ಅಕ್ಷರ ಜಾತ್ರೆಯಲ್ಲಿ ಹೆಚ್ಚು ಜನರು ಭಾಗವಹಿಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಬೇಕಿದೆ. ಭಾಷೆ, ವೇಷ ಬೇರೆ ಬೇರೆ ದೇಶದಲ್ಲಿ ನಾವೆಲ್ಲರೂ ಒಂದೆಯಾಗಿದ್ದೇವೆ. ಮಾತೃ ಭಾಷೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿ, ಕನ್ನಡದ ಕಿಚ್ಚು ಹಚ್ಚಲು ಇಂತಹ ಸಮ್ಮೇಳನಗಳು ಪೂರಕವಾಗಿವೆ. ಸಮ್ಮೇಳನಕ್ಕೆ ಜಾತಿ, ಪಕ್ಷಗಳಿರುವುದಿಲ್ಲ. ಎಲ್ಲರೂ ಕೂಡಿಕೊಂಡು ಕನ್ನಡ ಭಾಷೆ ಬೆಳೆಸಲು ಮುಂದಾಗಬೇಕಿದೆ ಎಂದು ಹೇಳಿದರು
ನಿಕಟಪೂರ್ವ ಸಮ್ಮೇಳನದ ಅಧ್ಯಕ್ಷ ಸಾಹಿತಿ ಲ.ರು.ಗೊಳಸಂಗಿ, ನಿವೃತ್ತ ಉಪವಿಭಾಗಾಧಿಕಾರಿ ಎಂ.ಎನ್.ಚೋರಗಸ್ತಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲ್ಲೂಕು ಘಟಕದ ಶಿವರುದ್ರಯ್ಯ ಹಿರೇಮಠ, ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿದರು.ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮುಖಂಡರಾದ ಜಿ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಮುಖಂಡರಾದ ಸುಭಾಸಗೌಡ ಪಾಟೀಲ, ರಮೇಶ ಸೂಳಿಭಾವಿ ತಹಶೀಲ್ದಾರ ಡಿ.ಎಚ್.ಕೋಮಾರ, ತಾ.ಪಂ ಇಓ ಭಾರತಿ ಚಲುವಯ್ಯ, ಬಿಇಓ ಎಸ್.ಜಿ.ಬಳಬಟ್ಟಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಪ.ಪಂ ಮುಖ್ಯಾಧಿಕಾರಿ ಶಬ್ಬೀರ ರೇವುರಕರ ಇದ್ದರು.ರಾಜುಗೌಡ ಪಾಟೀಲ ಸ್ವಾಗತಿಸಿದರು, ಡಾ.ಮಾಧವ ಗುಡಿ ನಿರೂಪಿಸಿದರು, ಶಿವಾನಂದ ಮಡಿಕೇಶ್ವರ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷ ಸಾಹಿತಿ ಈರಣ್ಣ ಬೆಕಿನಾಳ ಅವರನ್ನು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು. ಸಹಕಾರಿ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳ ಕೋಲಾಟ, ಲೇಜಿಮ್, ಮಹಾಪುರುಷರ ಛದ್ಮವೇಷ ಹಾಗೂ ಸಾರವಾಡದ ಕಲಾ ತಂಡದ ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಗಮನಸೆಳೆದವು.


Spread the love

About Yuva Bharatha

Check Also

ಹಿರೇಬೂದನೂರ : ಭಕ್ತರ ಸನ್ಮಾನ

Spread the loveಹಿರೇಬೂದನೂರ : ಭಕ್ತರ ಸನ್ಮಾನ ಮುರಗೋಡ : ಹಿರೇಬೂದನೂರ ಗ್ರಾಮದ ಶ್ರೀ ಸದ್ಗುರು ಸಂತ ಬಾಳುಮಾಮಾ ದೇವಸ್ಥಾನದ …

Leave a Reply

Your email address will not be published. Required fields are marked *

17 + ten =