ಇತಿಹಾಸದಲ್ಲೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆ: ಡಾ. ಡಿ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ :
ಜೈನ ಮುನಿ ಕಾಮಕುಮಾರ ನಂದಿಮಹಾರಾಜರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ದಿಗ್ಧಮೆ ವ್ಯಕ್ತಪಡಿಸಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಈ ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಿಗಂಬರ ಮುನಿಗಳ ಹತ್ಯೆಯಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು. ಇನ್ನೆಂದಿಗೂ ಇಂತಹ ಜೈನ ಮುನಿಗಳ ಹತ್ಯೆ ಸಂಭವಿಸಲೇಬಾರದು. ಇದಕ್ಕೆ ನಿಟ್ಟಿನಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ಕ್ರಮಗಳನ್ನು ಅವರು ಸ್ವಾಗತಿಸಿದ್ದಾರೆ.
ಕೇಮಾರು ಶ್ರೀ ಖಂಡನೆ :
ಹಿರೇಕೋಡಿ ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿಗಳ ಬರ್ಬರ ಹತ್ಯೆ ನಾಗರಿಕ ಸಮಾಜವೇ ತಲೆತಗ್ಗಿಸುವ ಕೆಲಸವಾಗಿದ್ದು, ಇದೊಂದು ಮೌಲ್ಯದ ಮೇಲಾದ ಕ್ರೌರ್ಯ, ಹಂತಕರನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಗ್ರಹಿಸಿದರು.
ಆಶ್ರಮದಿಂದ ಜುಲೈ 06 ರಂದು ನಾಪತ್ತೆಯಾಗಿದ್ದ ಜೈನ ಮುನಿಗಳನ್ನು ಬರ್ಬರವಾಗಿ ಹತ್ಯೆ ನಡೆಸಿದ್ದಲ್ಲದೆ ಕಟಕಬಾವಿ ಗ್ರಾಮದ ಹೊರವಲಯದ ತೆರೆದ ಕೊಳವೆ ಬಾವಿಯಲ್ಲಿ ಪತ್ತೆಯಾಗಿತ್ತು.
ಇಂತಹ ಹೇಯ ಕೃತ್ಯ ಇತಿಹಾಸದಲ್ಲೇ ಮೊದಲ ಘಟನೆಯಾಗಿದ್ದು, ಸಾಧು-ಸಂತರನ್ನೇ ಹತ್ಯೆ ನಡೆಸುವ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ಕಾನೂನು ಕ್ರಮದ ಸಡಿಲಿಕೆ ಕಾರಣವಾಗಿದೆ.ನಾಗರೀಕ ಸಮಾಜದಲ್ಲಿ ಸಾಧುಗಳಾಗಿರುವ, ಯಾರೊಬ್ಬರಿಗೂ ಹಿಂಸೆ ಬಯಸದ ಜೈನ ಮುನಿಗಳ ಭೀಕರ ಹತ್ಯೆ ಪ್ರಕರಣದಿಂದ ಇಡೀ ಸಮಾಜವೇ ಬೆಚ್ಚಿದ್ದು, ಸರ್ಕಾರ ಈ ಬಗ್ಗೆ ಕೂಡಲೇ ಗಂಭೀರವಾಗಿ ಪರಿಗಣಿಸಿ, ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದರು.
ಸಂತರಿಗೆ ಹೆಚ್ಚಿದ ಆತಂಕ :
ಸಾಧುಸಂತರ ಕೊಲೆ ಮಾಡುವ ಕೃತ್ಯ ದೇಶದಲ್ಲಿ ಹೆಚ್ಚುತ್ತಿದೆ. ಇದು ಸಂತ ವಲಯದಲ್ಲಿ ಆತಂಕ ಹೆಚ್ಚು ಮಾಡಿದೆ. ಸಂತರಿಗೆ ಸರಕಾರ ರಕ್ಷಣೆ ಕೊಡಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ ಮಾಡಬೇಕು ಎಂದು ಮೂಡಬಿದರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಸರಕಾರಕ್ಕೆ ಮನವಿ ಮಾಡಿದ್ದಾರೆ.