ಗಡ್ಡೆ ಸಹೋದರರಿಂದ ಎಚ್.ಎಂ. ರೇವಣ್ಣ, ಎಚ್. ವಿಶ್ವನಾಥಗೆ ಸತ್ಕಾರ
ಬೆಳಗಾವಿ: ರಾಜ್ಯದ ಉದ್ದಗಲಕ್ಕೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಿಸಲು ಶ್ರಮಿಸುತ್ತಿರುವ ಮಾಜಿ ಸಚಿವ, ಹಾಲುಮತ ಸಮಾಜದ ಮುಖಂಡ ಎಚ್.ಎಂ. ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರನ್ನು ಬೆಳಗಾವಿಯಲ್ಲಿ ಗಡ್ಡೆ ಸಹೋದರರು ಸತ್ಕರಿಸಿದರು.
ನಗರದ ಭಡಕಲ್ ಗಲ್ಲಿಯಲ್ಲಿರುವ ಗಡ್ಡೆ ಸಹೋದರರ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಮಾಜಿ ಸಚಿವ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರನ್ನು ಎಪಿಎಂಸಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಧುರೀಣ ಸುಧೀರ ಗಡ್ಡೆ ಹಾಗೂ ತುಷಾರ ಗಡ್ಡೆ ಸನ್ಮಾನಿಸಿದರು.
ಎಚ್. ಎಂ. ರೇವಣ್ಣ ಮಾತನಾಡಿ, ಭಾರತದ ಗೌರವವನ್ನು ಎತ್ತಿ ಹಿಡಿದು ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಶೌರ್ಯ, ಸಾಹಸ, ದೇಶಪ್ರೇಮ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ರಾಯಣ್ಣನ ಹೆಸರು ಹೇಳಿದ ಕೂಡಲೇ ರೋಮಾಂಚನ ಆಗುತ್ತದೆ. ಇಂಥ ಧೈರ್ಯ, ಸಾಹಸ ಮಕ್ಕಳಿಗೆ ತಿಳಿಸಬೇಕಾದ ಅನಿವಾರ್ಯ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಮಾತನಾಡಿ, ಬೆಳಗಾವಿ ಗಂಡು ಮೆಟ್ಟಿನ ನೆಲ. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಂಥ ಮಹಾ ನಾಯಕರು ಇದ್ದರು. ಈ ನೆಲ ಶೌರ್ಯದ ನೆಲ. ಸ್ವಾಭಿಮಾನದ ಜಿಲ್ಲೆಯ ಬಗ್ಗೆ ಅಭಿಮಾನದ ಎನಿಸುತ್ತದೆ ಎಂದರು.
ಎಪಿಎಂಸಿ ಮಾಜಿ ಉಪಾಧ್ಯಕ್ಷ, ಕಾಂಗ್ರೆಸ್ ಧುರೀಣ ಸುಧೀರ ಗಡ್ಡೆ ಮಾತನಾಡಿ, ಕಳೆದ 25-30 ವರ್ಷಗಳ ಹಿಂದೆ ರೇವಣ್ಣ ಹಾಗೂ ವಿಶ್ವನಾಥ ಅವರ ಸತತ ಪ್ರಯತ್ನದಿಂದಾಗಿ ಖಾನಾಪುರ ತಾಲೂಕಿನ ನಂದಗಡದಲ್ಲಿ ರಾಯಣ್ಣನ ಪ್ರತಿಮೆ ನಿರ್ಮಾಣಗೊಂಡಿದೆ. ಈಗ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ವೈಯಕ್ತಿಕವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಿಸಿದ ಶ್ರೇಯಸ್ಸು ರೇವಣ್ಣ ಅವರಿಗೆ ಸಲ್ಲುತ್ತದೆ. ರಾಜ್ಯದ ಉದ್ದಗಲಕ್ಕೂ ಪ್ರತಿಮೆ ಕಾರ್ಯ ನಡೆದಿರುವುದು ಹೆಮ್ಮೆಯ ವಿಷಯ ಎಂದರು.
ವಿವಿಧ ಕಡೆಗಳಲ್ಲಿ ರಾಯಣ್ಣನ ಪ್ರತಿಮೆ ನಿರ್ಮಿಸಲು ಸಹಕರಿಸುತ್ತಿರುವ ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಕಾರ್ಯವನ್ನು ಕೊಂಡಾಡಿದ ಸುಧೀರ್ ಗಡ್ಡೆ, ರಾಜ್ಯದ ಉದ್ದಗಲಕ್ಕೂ ರಾಯಣ್ಣನ ಶೌರ್ಯ ಸಾಹಸ ದಿಟ್ಟ ಹೋರಾಟ ಗೊತ್ತಾಗಬೇಕು. ಮುಂದಿನ ಪೀಳಿಗೆಗೆ ರಾಯಣ್ಣನ ಶೌರ್ಯ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಕಡೆಗೂ ರಾಯಣ್ಣನ ಪ್ರತಿಮೆಗಳು ನಿರ್ಮಾಣವಾಗುತ್ತಿವೆ. ಈ ದಿಸೆಯಲ್ಲಿ ರೇವಣ್ಣ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಸುಧೀರ ಗಡ್ಡೆ ಹೇಳಿದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತಿನ ವಿಶೇಷ ಅಧಿಕಾರಿ ಡಾ. ಎಂ. ಜಯಪ್ಪ, ವಿಟಿಯು ಮಾಜಿ ಕುಲಪತಿ ಮಹೇಶಪ್ಪ ಸೇರಿದಂತೆ ಹಾಲು ಮತ ಸಮಾಜದ ಮುಖಂಡರು ಇದ್ದರು.