ಸಾರ್ವತ್ರಿಕ ಚುನಾವಣೆ ಮತ ಎಣಿಕೆ: ಮದ್ಯ ಮಾರಾಟ ನಿಷೇಧ
ಯುವ ಭಾರತ ಸುದ್ದಿ ಬೆಳಗಾವಿ :
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮೇ 13 ರಂದು ಜರುಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಚುನಾವಣಾ ಪ್ರಕ್ರಿಯೆಗಳ ಮುಕ್ತ ಹಾಗೂ ನಿಷ್ಪಕ್ಷಪಾತ ರೀತಿಯಲ್ಲಿ ಶಾಂತಿಯುತವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಹಾಗೂ ಈ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೇ ಮೇ 13 ಮತ ಎಣಿಕೆಯ ದಿನದಂದು ಬೆಳಿಗ್ಗೆ 6 ಗಂಟೆಯಿಂದ ಮೇ 14 ರ ಬೆಳಿಗ್ಗೆ 6 ಗಂಟೆಯವರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲ ಮದ್ಯದ ಅಂಗಡಿ/ಬಾರ್‌ಗಳನ್ನು ಬಂದ್ ಇಡಲು ಹಾಗೂ ಎಲ್ಲ ರೀತಿಯ ಮದ್ಯ ತಯಾರಿಕಾ ಘಟಕಗಳು/ಸಾಗಾಣಿಕೆ/ಸಂಗ್ರಹಣೆಯನ್ನು/ಮಾರಾಟ ಮಳಿಗೆಗಳನ್ನು ಬಂದ್ ಇಡಲು ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಕೆ ಪಾಟೀಲ್ ಅವರು ಆದೇಶಿಸಿದ್ದಾರೆ.
ಆದೇಶದಲ್ಲಿಯ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಅಂಥವರು ಪ್ರಜಾ ಪ್ರತಿನಿಧಿ ಕಾಯ್ದೆ ೧೯೫೧ ರ ಕಲಂ ೧೩೫ ಅ (೨) ಮತ್ತು (೩) ರನ್ವಯ ಶಿಕ್ಷೆಗೆ ಒಳಪಡುವರು ಎಂದು ತಿಳಿಸಿದ್ದಾರೆ.