ಗಾಣಿಗರಿಗೆ 2ಎ ಮೀಸಲು ಕೊಡಿ
ಚಿತ್ರದುರ್ಗ :
ಉತ್ತರ ಕರ್ನಾಟಕದಲ್ಲಿ ಇರುವಂತೆ ರಾಜ್ಯದ ಉಳಿದ ಕಡೆಗಳನ್ನು ಗಾಣಿಗರಿಗೆ 2 ಎ ಮೀಸಲು ಸೌಲಭ್ಯ ನೀಡಬೇಕು ಎಂದು ವಿಜಯಪುರ ಅಖಿಲ ಭಾರತ ಗಾಣಿಗ ಪೀಠದ ಡಾ.ಜಯಕುಮಾರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಚಿತ್ರದುರ್ಗ ತಾಲೂಕು ಗಾಣಿಗ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಸಚಿವರು, ಶಾಸಕರಿಗೆ ಸನ್ಮಾನ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದರು.
ಮೂಲತಃ ಗಾಣಿಗರಾದ ನಾವು ದಾವಣಗೆರೆ, ಚಿತ್ರದುರ್ಗ ಸೇರಿ ವಿವಿಧ ಕಡೆ ವೀರಶೈವ ಲಿಂಗಾಯತ ಗಾಣಿಗ, ಲಿಂಗಾಯತ ಗಾಣಿಗ ಎಂದು ಜಾತಿ ಪ್ರಮಾಣ ಪತ್ರದಲ್ಲಿ ಬರೆಸಿದ್ದರ ಪರಿಣಾಮ ಆರ್ಹರಿದ್ದರೂ 2 ಎ ಮೀಸಲು ಸೌಲಭ್ಯ ಲಭಿಸುತ್ತಿಲ್ಲ. ಶಾಸಕರು ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಗಾಣಿಗರು ಸ್ವಾಭಿಮಾನಿಗಳು. 14 ಪಂಗಡಗಳು ಇದ್ದು ಕೊನೆಯದಾಗಿ ಸಂಘಟನೆ ಆದ ಸಮಾಜವಾಗಿದೆ. ನಾನಾ ಸಮುದಾಯಗಳ ಪ್ರೀತಿ ವಿಶ್ವಾಸ ಗಳಿಸಿ ಯಶಸ್ಸು ಕಂಡು ಪ್ರಗತಿ ಸಾಧಿಸಿದ್ದೇವೆ. ಸಮಾಜದಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳಿದ್ದು
ನೀಟ್, ಜೆಇಇ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸಲು ಗಾಣಿಗ ಪೀಠ ಸಿದ್ಧವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗಾಣಿಗರು ಸ್ವಾಭಿಮಾನಿಗಳಾಗಿದ್ದು, ಜಾತಿ ಗುರುತಿಸಿಕೊಂಡು ಮುಂದೆ ಬಂದವರಲ್ಲ. ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಆಯಾ ಭಾಗದ ಶಾಸಕರು ತಹಶೀಲ್ದಾರರಿಗೆ ಸೂಚಿಸಬೇಕು. ಸುಳ್ಳು ಮಾಹಿತಿ ನೀಡಿ ಮೀಸಲು ಕೇಳುತ್ತಿಲ್ಲ. ಆಗಿರುವ ತಪ್ಪನ್ನು ಸರಿಪಡಿಸಿ ಸಮುದಾಯದವರಿಗೆ ಕೊಡಿಸುವ ಕೆಲಸ ಶಾಸಕರಿಂದ ಆಗಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.
ಗಾಣಿಗರು ಸ್ವಂತ ಸಾಮರ್ಥ್ಯ ಹಾಗೂ ಇತರೆ ಸಮುದಾಯಗಳ ಪ್ರೀತಿ, ವಿಶ್ವಾಸಗಳಿಸಿ ಯಶಸ್ಸು ಕಂಡಿದ್ದಾರೆ. ಸಮಾಜದಲ್ಲೂ ಸಾಕಷ್ಟು ಬಡ ವಿದ್ಯಾರ್ಥಿಗಳಿದ್ದಾರೆ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೊಡಿಸಲು ಗಾಣಿಗ ಪೀಠ ಸಿದ್ಧವಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಚಿವ ಡಿ.ಸುಧಾಕರ್ ಮಾತನಾಡಿ, ಮೀಸಲು ಬೇಡಿಕೆ ಹೆಚ್ಚಾಗಿದ್ದು ಇದೊಂದು ಸೂಕ್ಷ್ಮ ವಿಚಾರವಾಗಿದ್ದು ವರದಿ ಆಧರಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ. ಎಸ್.ನವೀನ್ ಮಾತನಾಡಿ, ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಶಕ್ತಿ ಈ ಸಮಾಜಕ್ಕಿದೆ. ಮನೆಗಳಲ್ಲಿ ದೀಪ ಬೆಳಗುತ್ತಿರುವುದೇ ಈ ಸಮುದಾಯದಿಂದ. ಗಾಣಿಗ ಸಮುದಾಯದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿದ್ದಾರೆ ಎಂದರು.
ಗಾಣಿಗ ಸಮಾಜ ಯಾರಿಗೂ ತೊಂದರೆ ಮಾಡಿಲ್ಲ. ನಿಮ್ಮ ಸಮುದಾಯದವರ ಆದ ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಬರುತ್ತಿರಲಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಐವರು ಶಾಸಕರು ಗೆಲ್ಲುತ್ತಿರಲಿಲ್ಲ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಶಾಸಕ ರಘುಮೂರ್ತಿ, ವೀರೇಂದ್ರ ಪಪ್ಪಿ, ಸಂಘದ ಅಧ್ಯಕ್ಷ ಡಿ.ಎಸ್. ಸುರೇಶ್ ಉಪಸ್ಥಿತರಿದ್ದರು.