ದಿನ ಪತ್ರಿಕೆ ವಿತರಕರಿಗೆ ಆಹಾರ ಕೀಟ್ ವಿತರಿಸಿದ- ಅಮರೇಶ್ವರ ಶ್ರೀಗಳು.!
ಯುವ ಭಾರತ ಸುದ್ದಿ, ಗೋಕಾಕ: ಕೊರೋನಾ ಮಹಾಮಾರಿಯಿಂದ ಸಾವು ನೋವುಗಳನ್ನು ತಪ್ಪಿಸಲು ರಾಜ್ಯ ಸರಕಾರ ಲಾಕ್‌ಡೌನ್ ಹೊರಡಿಸಿದ ಹಿನ್ನಲೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಕುಂದರಗಿ ಅಡವಿಸಿದ್ದೇಶ್ವರ ಧರ್ಮ ವಾಹಿನಿಂದ ನಿರಂತರವಾಗಿ ಸ್ಪಂಧಿಸಲಾಗುತ್ತಿದೆ ಎಂದು ಕುಂದರಗಿಯ ಶ್ರೀ ಅಮರೇಶ್ವರ ಶ್ರೀಗಳು ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ದಿನ ಪತ್ರಿಕೆಗಳ ವಿತರಕರಿಗೆ ಆಹಾರ ಧಾನ್ಯಗಳ ಕೀಟ್‌ಗಳನ್ನು ವಿತರಿಸಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಕಡು ಬಡವರು, ಮಂಗಳಮುಖಿಯರು ಹಾಗೂ ದೇವಸ್ಥಾನಗಳಲ್ಲಿ ಭಿಕ್ಷೆ ಬೇಡಿ ಪಡೆಯುವ ಭೀಕ್ಷರು ತುತ್ತು ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಆರ್ಥಿಕವಾಗಿ ಸಬಲರಾದವರು ತುತ್ತು ಅನ್ನ ನೀಡುವ ಕಾಯಕಕ್ಕೆ ಮುಂದಾಗಬೇಕು ಎಂದರು.
ಕೊರೋನಾ ದಂತಹ ಪರಿಸ್ಥಿತಿಯಲ್ಲೂ ಎದೆಗುಂದದೆ ರಾಜ್ಯದಲ್ಲಿ ನಡೆಯುವ ಎಲ್ಲ ವಿಷಯಗಳನ್ನು ಮನೆ ಮನೆಗೆ ತಲುಪಿಸುವ ಕಾಯಕ ಮಾಡುತ್ತಿರುವ ದಿನ ಪತ್ರಿಕೆಗಳ ವಿತರಕರು ಸಹ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ಜನ ಅಡವಿಸಿದ್ಧೇಶ್ವರ ಭಕ್ತರು ಸ್ಫಂಧಿಸಿ ದಿನಸಿ ಕೀಟ್‌ಗಳನ್ನು ವಿತರಿಸಲು ಧರ್ಮ ವಾಹಿನಿಯ ಜೊತೆಗೆ ಕೈಜೋಡಿಸಿ ಸಹಕರಿಸಿದ್ದಾರೆಂದು ಅಮರೇಶ್ವರ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಸಮಾಜ ಸೇವಕ ಶಿವಾನಂದ ಹತ್ತಿ, ಅಡಿವೆಪ್ಪ ತೋಟಗಿ, ಅಡಿವೇಶ ಮಜ್ಜಗಿ, ಮುತ್ತುರಾಜ ಜಮಖಂಡಿ, ವಿವೇಕ ಮುಲಂಗಿ, ಪ್ರೇಸ್ ಅಸೋಸಿಯೇಷನ್ ಅಧ್ಯಕ್ಷ ಮನೋಹರ ಮೆಗೇರಿ, ನಿತ್ಯಾನಂದ ಅಮ್ಮಿನಭಾಂವಿ, ರವಿ ಹನಿಮನಾಳ ಸೇರಿದಂತೆ ಅನೇಕರು ಇದ್ದರು.