ಗೋಕಾಕನಲ್ಲಿ ಸುರಿದ ಮಳೆ ಭಾರಿ ಅವಾಂತರ ಸೃಷ್ಟಿಸಿದೆ!!
ಯುವ ಭಾರತ ಸುದ್ದಿ ಗೋಕಾಕ: ತಾಲೂಕಿನಾಧ್ಯಂತ ಸೋಮವಾರ ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಭಾರಿ ಮಳೆಗೆ ಇನ್ನಿಲ್ಲದ ಆವಾಂತರಗಳು ಸೃಷ್ಟಿಯಾಗಿವೆ.
ಗೋಕಾಕ ನಗರ ಸೇರಿ ತಾಲೂಕಿನ ವಿವಿಧೆಡೆ ಮಳೆಯಿಂದಾಗಿ ರಸ್ತೆ ಮೇಲೆ ಹೊಳೆಯಂತೆ ನೀರು ಹರಿಯುವ ದೃಶ್ಯ ಕಂಡು ಬಂದಿತು. ಅಲ್ಲದೇ ನೂರಾರು ಮನೆ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ನೀರು ನುಗ್ಗಿರುವ ಹಿನ್ನಲೆ ನೀರು ಹೋರಹಾಕಲು ಜನರು ಪರದಾಟ ನಡೆಸಿದರು.
ಗೋಕಾಕ ಕೊಣ್ಣೂರು ರಸ್ತೆಯ ಗ್ರಾಮಗಳ ರಸ್ತೆ ಬದಿಯಲ್ಲಿರುವ ಎಲ್ಲ ಮನೆಗಳಲ್ಲಿ ಮಳೆ ನೀರು ಹೊಕ್ಕಿದ್ದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ, ಮನೆಗಳ ಮತ್ತು ವಾಣಿಜ್ಯ ಮಳಿಗೆಗಳಲ್ಲಿಯ ಸಾಮಗ್ರಿಗಳು ಹಾಳಾಗಿವೆ. ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದೆ ಇದ್ದದ್ದರಿಂದ ಮನೆಗಳಿಗೆ ಮಳೆಯ ನೀರು ನುಗ್ಗಿದೆ ಎಂದು ಕೆಲವು ಸಾರ್ವಜನಿಕರು
ಆರೋಪಿಸಿ, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಬೆಟ್ಟದ ತೂದಿಯಲ್ಲಿ ನಿರ್ಮಾಣವಾದ ಜಲಪಾತ: ನಗರದ ಸಮೀಪದಲ್ಲಿರುವ ಭೈರಿಕೊಳ್ಳ ದೇವಸ್ಥಾನದ ಬೆಟ್ಟದಲ್ಲಿ ಸತತ ಮಳೆ ಸುರಿದ ಪರಿಣಾಮ ಮಳೆ ನೀರು ಬೆಟ್ಟದಿಂದ ಧುಮುಕುತ್ತಿರುವ ದೃಶ್ಯ ಕಂಡು ಬಂದಿತು.
ಗೋಕಾಕ ಫಾಲ್ಸ್ಗೆ ತೆರಳುವ ರಸ್ತೆಯ ಗಾಂಧೀ ಪ್ರತಿಮೆ ಬಳಿ ಬೆಟ್ಟದಿಂದ ಧುಮುಕುತ್ತಿರುವ ಮಳೆ ನೀರು ನೋಡಿ ವಾಹನ ಸವಾರರು ಮಳೆ ನೀರು ಎತ್ತರದಿಂದ ಧುಮ್ಮಿಕ್ಕುತ್ತಿರುವ ದೃಶ್ಯ ಮೊಬೈಲಗಳಲ್ಲಿ ಸೆರೆ ಹಿಡಿದಿದ್ದಾರೆ.
ಗೋಕಾಕ ಹಾಗೂ ಫಾಲ್ಸ್ ನಡುವೆ ಗುಡ್ಡ ಕುಸಿತ: ಸತತ ಒಂದೆ ಗಂಟೆ ಸುರಿದ ಭಾರಿ ಮಳೆಯಿಂದಾಗಿ ಗೋಕಾಕ ನಗರದಿಂದ ಜಲಪಾತಕ್ಕೆ ತೆರಳುವ ರಸ್ತೆಯ ಮಾರ್ಗದಲ್ಲಿ ಬೆಟ್ಟ ಕುಸಿತ ಉಂಟಾಗಿ, ಬೆಟ್ಟದಿಂದ ಕಲ್ಲು ಬಂಟೆಯೊAದು ರಸ್ತೆಗೆ ಉರುಳಿರುವ ಘಟನೆ ನಡೆದಿದೆ.
ಗೋಕಾಕನಿಂದ ಫಾಲ್ಸ್ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆ ಬೆಟ್ಟ ಕುಸಿತ ಅವಘಡಗಳನ್ನು ತಪ್ಪಿಸಲು ಈ ಹಿಂದೆಯೇ ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಅವರು ಮುಂಜಾಗೃತೆ ವಹಿಸಿ ರಸ್ತೆ ಅಗಲೀಕರಣ ಮಾಡಿದ ಹಿನ್ನಲೆ ದೊಡ್ಡ ಮಟ್ಟದಲ್ಲಿ ಸಂಭವಿಸುವ ಅಪಾಯ ತಡೆಯಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕರ ಕಾರ್ಯಾಲಯದಿಂದ ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ಸಣ್ಣ ಬಂಡೆ ತೆರವುಗೊಳಿಸಲು ಮುಂದಾಗಿದ್ದಾರೆ.
ಒಂದು ಗಂಟೆಯ ಮಳೆಗೆ ಗೋಕಾಕ ನಗರ ಸೇರಿ ತಾಲೂಕಿನಾಧ್ಯಂತ ಅನೇಕ ಅವಾಂತರಗಳು ಸೃಷ್ಟಿಯಾಗಿದ್ದು, ಜತೆಗೆ ಬೆಟ್ಟದ ಮೇಲಿನಿಂದ ಮಳೆ ನೀರು ಸುರಿದು ಸೋಜಿಗ ಸೃಷ್ಠಿಯಾಯಿತು.