ಗೋಕಾಕ ಬಿಜೆಪಿ ಪದಾಧಿಕಾರಿಗಳ ನಿಯುಕ್ತಿ :
ಕಾರ್ಯಕರ್ತರು, ಪದಾಧಿಕಾರಿಗಳು ಗೆಲುವಿನ ರೂವಾರಿಗಳು : ರಮೇಶ ಜಾರಕಿಹೊಳಿ
ಯುವ ಭಾರತ ಸುದ್ದಿ ಗೋಕಾಕ :
ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ನಿರ್ವಹಣಾ ಸಮಿತಿಯ ನೂತನ ಪದಾಧಿಕಾರಿಗಳ ನಿಯುಕ್ತಿ ಗೋಕಾಕ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆಯಿತು.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ
ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ನೂತನವಾಗಿ ನಿಯುಕ್ತಿಗೊಂಡಿರುವ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ವಿಶೇಷ ಸಭೆ ಶಾಸಕ ರಮೇಶ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಚುನಾವಣಾ ನಿರ್ವಹಣಾ ಸಮಿತಿಯ ವಿವಿಧ ಜವಾಬ್ದಾರಿಗಳನ್ನು ಪ್ರಭಾರಿಗಳಿಗೆ ನಿಯುಕ್ತಿ ಮಾಡಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಳ ಮಹತ್ವದಿಂದ ಕೂಡಿದೆ. ಈ ಬಾರಿ ಬಹಳ ದೊಡ್ಡ ಅಂತರದಿಂದ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ನಾವು ಗೆಲುವು ಸಾಧಿಸಬೇಕಾಗಿದೆ. ಜೊತೆಗೆ ರಾಜ್ಯದಲ್ಲೂ ಬಿಜೆಪಿ ಆಡಳಿತ ಮತ್ತೆ ಮರುಕಳಿಸಬೇಕು. ಬಿಜೆಪಿಗೆ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳೇ ಗೆಲುವಿನ ರೂವಾರಿಗಳು. ಎಲ್ಲರೂ ಶಕ್ತಿಮೀರಿ ಪ್ರಯತ್ನಿಸಿ ಬಲ ತಂದುಕೊಡಬೇಕು. ಈ ಸಲದ ಬಿಜೆಪಿ ಗೆಲುವು ಐತಿಹಾಸಿಕವಾಗಬೇಕು ಎಂದು ತಿಳಿಸಿದರು.
ವಿರೋಧಿಗಳಿಗೆ ಚುನಾವಣೆಯಲ್ಲಿ ನಮ್ಮ ವಿರುದ್ಧ ಅಪಪ್ರಚಾರ, ಷಡ್ಯಂತ್ರವೇ ಅಸ್ತ್ರವಾಗಿದೆ. ಚುನಾವಣೆಯಲ್ಲಿ ನಮ್ಮ ವಿರೋಧಿಗಳು ದುರ್ಬಲರು ಎಂದು ಪರಿಗಣಿಸದೇ ಅವರು ಪ್ರಬಲರು ಎಂದು ಭಾವಿಸಿ ಚುನಾವಣೆ ಎದುರಿಸೋಣ. ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮ ವಹಿಸಿ ಶಕ್ತಿ ಮೀರಿ ದುಡಿದು ಗೆಲುವಿನ ಇತಿಹಾಸ ಬರೆಯಬೇಕು ಎಂದು ಕರೆ ನೀಡಿದರು.
ಪಕ್ಷದ ಗೆಲುವಿಗೆ ವಿಸ್ತಾರಕರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಆಹರ್ನಿಶಿ ದುಡಿಯಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಗೆಲುವು ಹೊಸ ಮುನ್ನುಡಿ ಬರೆಯಲು ಕಾರಣವಾಗಬೇಕು ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರಾದ ಲಕ್ಷ್ಮಣ ತಪಸಿ, ಸುಭಾಷ ಪಾಟೀಲ, ರಾಜೇಂದ್ರ ಗೌಡಪ್ಪಗೋಳ, ಭೀಮಶಿ ಭರಮನ್ನವರ, ಜಯಾನಂದ ಹುಣಚ್ಯಾಳಿ, ಟಿ. ಆರ್. ಕಾಗಲ್, ಸುರೇಶ ಸನದಿ, ಲಕ್ಷ್ಮೀಕಾಂತ ಎತ್ತಿನಮನಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.