ಅಯ್ಯಪ್ಪ ಭಕ್ತರಿಗೆ ಸಂತಸದ ಸುದ್ದಿ
ಯುವ ಭಾರತ ಸುದ್ದಿ ಕೊಟ್ಟಾಯಂ:
ಅಯ್ಯಪ್ಪ ಭಕ್ತರಿಗೆ ಕೇಂದ್ರ ಸರ್ಕಾರ ಸಂತಸದ ನೀಡಿದೆ. ಕೇರಳದ ಶಬರಿಮಲೆ ದೇಗುಲಕ್ಕೆ ಸಮೀಪವಿರುವ ಕೊಟ್ಟಾಯಂ ಜಿಲ್ಲೆಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಸರ್ಕಾರ ಸಲ್ಲಿಸಿದ ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನ ವರದಿಯನ್ನು ಗಣನೆಗೆ ತೆಗೆದುಕೊಂಡು ಅನುಮೋದನೆ ನೀಡಲಾಗಿದೆ.
ಈ ಯೋಜನೆಯಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಭಕ್ತರಿಗೆ ಅನುಕೂಲವಾಗಲಿದೆ. ಮೂಲಗಳ ಪ್ರಕಾರ, ಯೋಜನೆಗಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಸರ್ಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
ಕೇಂದ್ರ ವಿಮಾನಯಾನ ಸಚಿವಾಲಯ ಮತ್ತು ಯೋಜನಾ ಪ್ರಾಧಿಕಾರ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ನಡುವಿನ ಬಹು ಸುತ್ತಿನ ಚರ್ಚೆಗಳ ನಂತರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಈ ವಿಮಾನ ನಿಲ್ದಾಣವು ಬೇರೆ ಬೇರೆ ರಾಜ್ಯಗಳಿಗೆ ಹೆಚ್ಚಿನ ಸಂಪರ್ಕವನ್ನು ಸಾಧಿಸುತ್ತದೆ ಮತ್ತು ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದು ಸಚಿವಾಲಯ ಹೇಳಿದೆ.
ವಿಮಾನ ನಿಲ್ದಾಣಕ್ಕಾಗಿ 2,250 ಎಕರೆ ಭೂಮಿಯನ್ನ ಗುರುತಿಸಲಾಗಿದ್ದು, 4 ಸಾವಿರ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ. ಇತ್ತೀಚಿನ ಸರ್ಕಾರಿ ಆದೇಶದ ಪ್ರಕಾರ (GO), ವಿಮಾನ ನಿಲ್ದಾಣದ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಎರುಮೇಲಿ ದಕ್ಷಿಣ ಮತ್ತು ಕಂಜಿರಪಲ್ಲಿ ತಾಲೂಕಿನ ಮಣಿಮಲಾ ಗ್ರಾಮಗಳಲ್ಲಿ ಒಟ್ಟು 1,039.876 ಹೆಕ್ಟೇರ್ (2,570 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಪ್ರಸ್ತಾವಿತ ಪ್ರದೇಶವು ಚೆರುವಳ್ಳಿ ಎಸ್ಟೇಟ್‌ನಲ್ಲಿ 2,263.18 ಎಕರೆ ಭೂಮಿಯನ್ನು ಒಳಗೊಂಡಿದೆ.
ಶಬರಿಮಲೆಯಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಈಗಾಗಲೇ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಈ ಟ್ವೀಟ್ ಅನ್ನು ಪ್ರಧಾನಿ ಮೋದಿ ರೀ ಟ್ವೀಟ್ ಮಾಡಿದ್ದಾರೆ ಹಾಗೂ ಇದು ಅಯ್ಯಪ್ಪ ಭಕ್ತರಿಗೆ ಹಾಗೂ ಪ್ರವಾಸೋದ್ಯಕ್ಕೆ ಒಳ್ಳೆಯ ಸುದ್ದಿ ಎಂದು ಹೇಳಿದ್ದಾರೆ.