ಗ್ರಾಮ ಪಂಚಾಯತಿ ಉಪ ಚುನಾವಣೆ: ಅಧಿಸೂಚನೆ ಪ್ರಕಟ
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಜಿಲ್ಲೆಗೆ ಸಂಭಂದಿಸಿದಂತೆ ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳನ್ನು ಭರ್ತಿ ಮಾಡಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಉಪ ಚುನಾವಣೆ -2023 ರ ಅಧಿಸೂಚನೆಯನ್ನು ಹೊರಡಿಸಿರುತ್ತಾರೆ.
ರಾಮದುರ್ಗ ತಾಲೂಕಿನ ನರಸಾಪುರ 1 ಸದಸ್ಯ ಸ್ಥಾನ, ಬೆಳಗಾವಿ ತಾಲೂಕಿನ ಬೆಳಗುಂದಿ, ಹಿರೇಬಾಗೇವಾಡಿ, ಮೋದಗಾ ತಲಾ 1, ಖಾನಾಪುರ 1, ಕಾಗವಾಡ ತಾಲೂಕಿನ ಉಗಾರ ಬದ್ರುಕ 1, ಗೋಕಾಕ್ ತಾಲೂಕಿನ ನಲ್ಲಾನಟ್ಟಿ 1 ಸದಸ್ಯ ಸ್ಥಾನ ಸೇರಿದಂತೆ ಒಟ್ಟು 7 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ.
ನಾಮ ಪತ್ರ ಸಲ್ಲಿಸಲು ದಿನಾಂಕ ಫೆಬ್ರುವರಿ 14, 2023 ಮಂಗಳವಾರ ಕೊನೆಯ ದಿನವಾಗಿರುತ್ತದೆ. ಬುಧವಾರ (ಫೆ.15) ನಾಮ ಪತ್ರ ಪರಿಶೀಲಿಸುವ ಕೊನೆಯ ದಿನಾಂಕವಾಗಿರುತ್ತದೆ.
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಫೆ.17 ಕೊನೆಯ ದಿನಾಂಕವಾಗಿರುತ್ತದೆ. ಮತದಾನ ಅವಶ್ಯವಿದ್ದರೆ, ಫೆಬ್ರುವರಿ 25 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು.
ಅದೇ ರೀತಿಯಲ್ಲಿ ಮರು ಮತದಾನ ಅವಶ್ಯವಿದ್ದಲ್ಲಿ, ಫೆಬ್ರುವರಿ 27 ರಂದು ಬೆಳಿಗ್ಗೆ 7 ಗಂಟೆಯಿಂದ 5 ಗಂಟೆಯವರೆಗೆ ಮರು ಮತದಾನ ನಡೆಯಲಿವೆ.
ಫೆ.28 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಬಂಧಿತ ತಾಲೂಕಾ ಕೇಂದ್ರಗಳಲ್ಲಿ ಮತಗಳ ಎಣಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.