ಗ್ರಾಮ ಸ್ವರಾಜ್ಯಕಾಗಿ ಗ್ರಾಮ ಪಂಚಾಯತಿ ಸದಸ್ಯರು ಬೆಂಗಳೂರು ಚಲೋ!
ಯುವ ಭಾರತ ಸುದ್ದಿ ಕೊಲ್ಹಾರ : ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿರುವ ಗ್ರಾಮ ಪಂಚಾಯತಿ ನೌಕರರ ಕುಟುಂಬಕ್ಕೆ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಗಳಲ್ಲಿ ಲಭ್ಯವಿರುವ ತೆರಿಗೆ ಹಣದಲ್ಲಿ ಪ್ರತಿ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ ಧನವನ್ನು ನೀಡಬೇಕು ಎಂದು ಕೊಲ್ಹಾರ ತಾಲೂಕಾ ಗ್ರಾಮ ಪಂಚಾಯತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಪ್ರದೀಪ ಪಾಟೀಲ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತಿ ನೌಕರರು ಕೋವಿಡ್ 19 ರ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವಾಗ ರೋಗಗ್ರಸ್ತರ ಸಂಪರ್ಕದಿಂದ ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ಜಿಲ್ಲಾ ಹಾಗೂ ತಾಲೂಕ ಪಂಚಾಯತಿಯಲ್ಲಿ ಲಭ್ಯವಿರುವ ಅನುದಾನದಿಂದ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವದು ಎಂದು ಸರ್ಕಾರ ಘೋಷಣೆ ಮಾಡಿತ್ತು.
ಆದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳಲ್ಲಿ ಯಾವುದೇ ಅನುದಾನ ಲಭ್ಯವಿಲ್ಲದ ಕಾರಣ, ಜಿಲ್ಲಾ ಪಂಚಾಯತಿ ಮಾತೃ ಖಾತೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡುವಂತೆ ರಾಜ್ಯದ ಕೆಲವು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯ ಮಾಡಿದ್ದರಿಂದ, ಸರ್ಕಾರ ಕೇವಲ 50 ಕೋಟಿ ಪರಿಹಾರ ಧನವನ್ನು ಬಿಡುಗಡೆ ಮಾಡಿ ಕೈ ತೊಳೆದುಕೊಂಡು ಬಿಟ್ಟಿದೆ.ಆದರೆ ಕೋವಿಡ್ ಸಂದರ್ಭದಲ್ಲಿ 160 ಜನ ಗ್ರಾಮ ಪಂಚಾಯತಿ ನೌಕರರು ಮೃತರಾಗಿದ್ದಾರೆ. ಇನ್ನುಳಿದ ಕುಟುಂಬಕ್ಕೆ ಕೂಡಲೇ ಸರ್ಕಾರ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಡಿ.19 ರಂದು ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ನೇತೃತ್ವದಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡು ಅನಿರ್ದಿಷ್ಟಾವಧಿ ಸತ್ಯಾಗ್ರಹ ಮಾಡುತ್ತೇವೆ. ಈ ಸತ್ಯಾಗ್ರಹಕ್ಕೆ ಕೊಲ್ಹಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸತ್ಯಾಗ್ರಹ ಯಶಸ್ವಿಗೊಳಿಸಲು ತಿಳಿಸಿದರು.