ಮಹತ್ತರ ಬೆಳವಣಿಗೆ : ಪುತ್ತಿಲರನ್ನು ದಿಲ್ಲಿಗೆ ಕರೆಸಿ ಮಾತನಾಡಿದ ಬಿ.ಎಲ್. ಸಂತೋಷ್..!
ದೆಹಲಿ :
ಮಹತ್ತರ ಬೆಳವಣಿಗೆ ಒಂದರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವೆಂದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದು ತುಸು ಅಂತರದಲ್ಲಿ ಸೋಲು ಕಂಡಿರುವ ಹಿಂದು ಸಂಘಟನೆಗಳ ನಾಯಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆಸಿಕೊಂಡು ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ನಳಿನ್ ಕುಮಾರ್ ಕಟೀಲು ಅವರ ಬದಲಿಗೆ ಬಿಜೆಪಿಯಿಂದ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಬೇಕು ಎಂಬ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಪುತ್ತಿಲ ಅವರು ಇಡೀ ಲೋಕಸಭಾ ಕ್ಷೇತ್ರದ ಮಿಂಚಿನ ಸಂಚಾರ ನಡೆಸಿ ತಮ್ಮ ಸಂಘಟನೆಯನ್ನು ಚುರುಕುಗೊಳಿಸುತ್ತಿದ್ದಾರೆ.
ಪುತ್ತೂರು ಹಾಗೂ ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಪಕ್ಷ ಸಂಘಟನೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಾರ್ಯಕರ್ತರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಇಬ್ಬರು ನಾಯಕರ ನಡುವೆ ಚರ್ಚೆ ನಡೆದಿದೆ. ಹಳೆಯದನ್ನು ಮರೆತು ಮುಂದಿನ ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆದಿದ್ದು ಸಂತೋಷ ಅವರು ಪುತ್ತಿಲ ಅವರಿಗೆ ಬಿಜೆಪಿ ಸಂಘಟನೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಪುತ್ತಿಲ ಅವರ ಜೊತೆ ಭಾಸ್ಕರ ಆಚಾರ್ಯ ಹಿಂದಾರು, ಪುತ್ತೂರಿನ ವೈದ್ಯ ಡಾ.ಸುರೇಶ ಪುತ್ತೂರಾಯ, ಉದ್ಯಮಿ ಗಣೇಶ್, ರಾಜಾರಾಮ್ ಬಿ ಎಲ್ ಭಾಗವಹಿಸಿದ್ದರು. ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರದಿಂದ ಈ ಬಾರಿ ಯಾವುದೇ ಕಾರಣಕ್ಕೂ ನಳಿನ್ ಕುಮಾರ್ ಕಟೀಲು ಅವರಿಗೆ ಟಿಕೆಟ್ ನೀಡಬಾರದು ಎಂಬ ಚರ್ಚೆ ಜೋರಾಗಿದೆ. ಈ ಬಗ್ಗೆ ಚರ್ಚೆ ನಡೆದಿದೆ. ಈಗಾಗಲೇ ಬಿಜೆಪಿಯಿಂದ ಹೊರ ಹೋಗಿರುವ ಪುತ್ತಿಲರನ್ನು ಮತ್ತೆ ಪಕ್ಷಕ್ಕೆ ಕರೆ ತರಲು ಬಿ.ಎಲ್. ಸಂತೋಷ್ ಮುಂದಾಗಿದ್ದಾರೆ. ಪಕ್ಷದ ಸದಸ್ಯತ್ವ ಪಡೆದು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.