ರಾಷ್ಟೀಯ ಪಕ್ಷಗಳಿಂದ ಜೈನ ಸಮಾಜಕ್ಕೆ ಅನ್ಯಾಯ: ಸಮಾಜದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಆಗ್ರಹ
ಯುವ ಭಾರತ ಸುದ್ದಿ ಬೆಳಗಾವಿ :
ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಎಲ್ಲಾ ರಾಷ್ಟೀಯ ಪಕ್ಷಗಳು ಜೈನ ಸಮಾಜವನ್ನು ಕಡೆಗಣಿಸಿರುವುದು ಖಂಡನೀಯವಾಗಿದ್ದು, ಬಿಜೆಪಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಸಂಜಯ ಪಾಟೀಲ ಮತ್ತು ಖಾನಾಪುರ ಕ್ಷೇತ್ರದಿಂದ ಪ್ರಮೋದ ಕೊಚೇರಿ ಹಾಗೂ ಕಾಂಗ್ರೆಸ್ ಪಕ್ಷದಿಂದ ತೇರದಾಳ ಮತಕ್ಷೇತ್ರಕ್ಕೆ ಡಾ. ಪದ್ಮಜಿತ ನಾಡಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕೆಂದು ಜೈನ ಸಮಾಜದ ಮುಖಂಡ ವಿನೋದ ದೊಡ್ಡಣ್ಣವರ ಆಗ್ರಹಿಸಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ರಾಷ್ಟೀಯ ಪಕ್ಷಗಳು ಜೈನ ಸಮಾಜವನ್ನು ಕಡೆಗಣಿಸಿವೆ. ಜೈನ ಸಮಾಜ ಎಲ್ಲಾ ಸಮುದಾಯದೊಂದಿಗೆ ಬೆರೆತು ಸಾಮಾಜಿಕ ಸೇವೆಗಳನ್ನು ಕೈಗೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಆದರೆ ರಾಜಕೀಯ ಮತ್ತು ಅಧಿಕಾರದ ವಿಷಯ ಬಂದಾಗ ಎಲ್ಲ ರಾಷ್ಟ್ರೀಯ ಪಕ್ಷಗಳು ಜೈನ ಸಮಾಜವನ್ನು ತುಳಿಯುತ್ತ ಬಂದಿವೆ. ಈ ಬೆಳವಣಿಗೆಯನ್ನು ಜೈನ ಸಮಾಜ ಒಕ್ಕೊರಲಿನಿಂದ ಖಂಡಿಸುತ್ತದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಲು ಪ್ರಮೋದ ಕೊಚೇರಿ ಅವರ ಕೊಡುಗೆ ಅಪಾರವಾಗಿದೆ. ಪ್ರತಿ ಬಾರಿ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ. ಈ ಬಾರಿಯಾದರೂ ಅವರಿಗೆ ಟಿಕೆಟ್ ನೀಡಬೇಕು. ಅದರಂತೆ ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಪಕ್ಷ ಸಂಘಟನೆ ಮಾಡಿ ಹಾಗೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಗೆಲುವಿಗೆ ಕಾರಣಕರ್ತರಾದ ಮಾಜಿ ಶಾಸಕ ಸಂಜಯ ಪಾಟೀಲ ಅವರಿಗೂ ಟಿಕೆಟ್ ನಿರಾಕರಿಸಿವುದು ದುಃಖದ ಸಂಗತಿ. ಇವರಿಬ್ಬರಿಗೂ ಟಿಕೆಟ್ ನೀಡುವ ಮೂಲಕ ಅನ್ಯಾಯ ಸರಿಪಡಿಸಬೇಕೆಂದು ಅವರು ಹೇಳಿದರು.
ಜೈನ ಸಮಾಜದ ಮುಖಂಡರಾದ ಡಾ. ಎನ್,.ಎ. ಮಗದುಮ್ಮ ಮತ್ತು ಅರುಣ ಯಲಗುದ್ರಿ ಮಾತನಾಡಿ, ತೇರದಾಳ ಮತ ಕ್ಷೇತ್ರದಲ್ಲಿ ಜೈನ ಸಮಾಜದ ಡಾ. ಪದ್ಮಜಿತ ನಾಡಗೌಡ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.
ಒಟ್ಟಾರೆ ಎಲ್ಲ ರಾಷ್ಟ್ರೀಯ ಪಕ್ಷಗಳು ರಾಜಕೀಯ ಮತ್ತು ಅಧಿಕಾರದ ವಿಷಯ ಬಂದಾಗ ಜೈನ ಸಮಾಜವನ್ನು ಕಡೆಗಣಿಸುತ್ತ ಬಂದಿವೆ. ಆದರೆ ಈ ಬಾರಿ ಈ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ . ಈ ಬಗ್ಗೆ ಎರಡೂ ಪಕ್ಷದ ಹಿರಿಯರೂ ಗಮನ ಹರಿಸಬೇಕು. ಇಲ್ಲದಿದ್ದಲ್ಲಿ ಸಮಾಜ ಒಂದು ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಪತ್ರಿಕಾಗೊಷ್ಟಿಯಲ್ಲಿ ಹುಕ್ಕೇರಿ ಜೈನ ಸಮಾಜದ ಪ್ರಮುಖ ಮಹಾವೀರ ನಿಲಜಗಿ, ಬಾಹುಬಲಿ ನಾಗನೂರಿ, ಉಗಾರ ಗ್ರಾಮದ ಆನಂದ ಸದಲಗೆ , ರಾಜೇಂದ್ರ ಜೈನ, ಶ್ರೀಪಾಲ ಖೆಮಲಾಪುರೆ , ಜಬರಚಂದ ಸಾಮಸುಖ, ಅಭಯ ಅವಲಕ್ಕಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಜೈನ ಸಮಾಜದ ಮುಖಂಡರು ಉಪಸ್ಥಿತರಿದ್ದರು.