ಮೋದಿ ಮೆಗಾ ರೋಡ್ ಶೋಗೆ ಜನ ಸಾಗರ ; ರಸ್ತೆ ಬದಿಗಳಲ್ಲಿ ಜನವೋ ಜನ !

ಬೆಂಗಳೂರು :
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಆರಂಭವಾಗಿದ್ದು, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ. ಮೋಹನ ಅವರು ಸಾಥ್ ನೀಡಿದ್ದಾರೆ.
ಸೋಮೇಶ್ವರ ಸಭಾಭವನದಿಂದ ರೋಡ್ ಶೋ ಆರಂಭವಾಗಿದ್ದು 26 ಕಿಮೀ ವರೆಗೆ ನಡೆಯಲಿದೆ. ಪ್ರಧಾನಿ ಮೋದಿ ರೋಡ್ ಶೋ ಮಾರ್ಗದಲ್ಲಿ ಜನ ಕಿಕ್ಕಿರಿದು ಸೇರಿದ್ದು, ರಸ್ತೆಯುದ್ದಕ್ಕೂ ಪೊಲೀಸ್ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ 10:20ಕ್ಕೆ ಮೋದಿ ರೋಡ್ ಶೋ ಆರಂಭವಾಗಿದ್ದು, ಜೆಪಿ ನಗರದಿಂದ ಮಲ್ಲೇಶ್ವರದವರೆಗೂ ಸುಮಾರು 26.5 ಕಿಮೀ ರೋಡ್ ಶೋ ಸಾಗಲಿದೆ. ಮೋದಿ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ಜನ ಸಾಗರವೇ ನೆರೆದಿದೆ.
ರೋಡ್ ಶೋ ನೋಡಲು ಆಗಮಿಸುವ ಜನರನ್ನು ಪರಿಶೀಲಿಸಿ ಬ್ಯಾರಿಕೇಡ್ ಬಳಿ ಬಿಡಲಾಗುತ್ತಿದೆ. ಕೇಸರಿ ಪೇಟ ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ಜನರತ್ತ ಕೈಬೀಸುತ್ತಿದ್ದಾರೆ. ಜನರೂ ಕೂಡ ಪ್ರಧಾನಿ ಮೋದಿಗೆ ಜೈ ಜೈ ಎನ್ನುತ್ತಾ ಜೈಕಾರ ಹಾಕುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.
ಮೋದಿ ಅವರ ರೋಡ್ ಶೋ ಭದ್ರತೆಗಾಗಿ 8 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಸುಮಾರು 26.5 ಕಿಮೀಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಮೋದಿ ಸುತ್ತ ಎಸ್‌ಪಿಜಿ ಭದ್ರತೆ ಇದೆ.
ರೋಡ್ ಶೋ ಹೇಗೆ ಸಾಗುತ್ತದೆ…?:
ಶ್ರೀ ಸೋಮೇಶ್ವರ ಸಭಾ ಭವನದಿಂದ ರೋಡ್ ಶೋ ಪ್ರಾರಂಭವಾಗಿದೆ. ಜೆಪಿ ನಗರ 5ನೇ ಹಂತ, ಜಯನಗರ 5ನೇ ಬ್ಲಾಕ್, ಜಯನಗರ 4ನೇ ಬ್ಲಾಕ್, ಸೌತ್ ಎಂಡ್ ಸರ್ಕಲ್ ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಮೈಸೂರು ರೋಡ್ ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರಸ್ತೆ ಜಂಕ್ಷನ್, ಶಂಕರ ಮಠ ಚೌಕ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ವೃತ್ತ 18ನೇ ಅಡ್ಡ ರಸ್ತೆ ಜಂಕ್ಷನ್, ಸಂಪಿಗೆ ರಸ್ತೆ ಮೂಲಕ ಹಾದು ಹೋಗಲಿದೆ.
YuvaBharataha Latest Kannada News