ಪ್ರಧಾನಿಗೆ ನಾಲಾಯಕ್ ಎಂದ ಖರ್ಗೆ ಪುತ್ರ
ಯುವ ಭಾರತ ಸುದ್ದಿ ಚಿತ್ತಾಪುರ :
ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ನಾಲಾಯಕ್ ಎಂದು ಮೂದಲಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಆಗಿದ್ದಾರೆ. ನರೇಂದ್ರ ಮೋದಿ ಸೇಡಂ ಮತ್ತು ಮಳಖೇಡಕ್ಕೆ ಬಂದಾಗ ಬಂಜಾರ ಸಮಾಜದವರಿಗೆ ನಿಮ್ಮ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಎಂದು ಹೇಳಿದ್ದರು. ಆದರೆ ಈಗ ಬಂಜಾರ ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಲಾಗಿದೆ. ಇಂತಹ ನಾಲಾಯಕ್ ಮಗನಿದ್ದರೆ ದೇಶ ಹೇಗೆ ನಡೆಯುತ್ತದೆ ಎಂದು ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
ದೇಶ ನಡೆಸುವುದು ಮಾತ್ರವಲ್ಲ, ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯುವುದಿಲ್ಲ ಎಂದು ಹೇಳಿದರು.
ನರೇಂದ್ರ ಮೋದಿಗೆ 91 ಬಾರಿ ಕಾಂಗ್ರೆಸ್ ನಿಂದಿಸಿದ ಬಗ್ಗೆ ಮಾತನಾಡುವುದಕ್ಕೆ ಸಮಯವಿದೆ. ಆದರೆ ಗುತ್ತಿಗೆದಾರರ ಸಂಘ, ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ, ಗೂಳಿಹಟ್ಟಿ ಶೇಖರ್ ಅವರ ಪತ್ರದ ಬಗ್ಗೆ ಉತ್ತರ ಕೊಟ್ಟಿಲ್ಲ. ಬಿಜೆಪಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮೋದಿ ಮಾತನಾಡಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.