ಕೊರಗಜ್ಜ ಕೋಲ : ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ರದ್ದು
ಯುವ ಭಾರತ ಸುದ್ದಿ ಮಂಗಳೂರು :
ಮಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ. ರೋಡ್ ಶೋ ಸಂಚರಿಸುವ ದಾರಿಯಾದ ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ದೈವದ ಕೋಲ ಇರುವ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಮತ್ತು ಕೋಲಕ್ಕೆ ಸಮಸ್ಯೆ ಆಗಬಾರದು ಎಂದು ರೋಡ್ ಶೋ ರದ್ದು ಮಾಡಲಾಗಿದ್ದು , ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಸಭೆಯೂ ಸ್ಥಳಾಂತರವಾಗಿದೆ, ಮಂಗಳೂರು ಏರ್ ಪೋರ್ಟ್ ಬಳಿಯೇ ಪಕ್ಷದ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಇದೀಗ ಬಿಜೆಪಿ ನಿರ್ಧಾರಕ್ಕೆ ಸರ್ವಪಕ್ಷಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಕೊರಗಜ್ಜ ಕರಾವಳಿಯ ಅತ್ಯಂತ ಕಾರಣಿಕ ದೈವವಾಗಿದ್ದು ಆಧುನಿಕ ಯುಗದಲ್ಲೂ ಸಾಕಷ್ಟು ಪವಾಡಗಳನ್ನು ಸೃಷ್ಟಿಸಿರುವುದನ್ನು ಇಲ್ಲಿ ಗಮನಿಸಬಹುದು.
ಕೋಲಕ್ಕೆ ತೊಂದರೆಯಾಗಬಾರದು :
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮ ರದ್ದಾಗಿದೆ. ರೋಡ್ ಶೋ ಸಂಚರಿಸುವ ದಾರಿಯಲ್ಲಿ ಕೊರಗಜ್ಜ ದೈವದ ಕೋಲ ಇರುವ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.
ಕೊರಗಜ್ಜ ದೈವದ ಕೋಲಕ್ಕೆ ಸಮಸ್ಯೆಯಾಗಬಾರದೆಂದು ರೋಡ್ ಶೋ ರದ್ದು ಮಾಡಲಾಗಿದೆ. ಮಂಗಳೂರಿನ ಪದವಿನಂಗಡಿ ಬಳಿಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ಕೊರಗಜ್ಜ ಕೋಲ ನಿಗದಿಯಾಗಿದೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಮತ್ತು ಕೋಲಕ್ಕೆ ಸಮಸ್ಯೆ ಆಗಬಾರದು ಅಂತ ರೋಡ್ ಶೋ ರದ್ದು ಮಾಡಿರುವುದಾಗಿ ಭರತ್ ಶೆಟ್ಟಿ ಹೇಳಿದ್ದಾರೆ. ಪದವಿನಂಗಡಿ ಬಳಿಯ ಖಾಸಗಿ ಸಭಾಂಗಣದಲ್ಲಿ ನಡೆಯಬೇಕಿದ್ದ ಬಿಜೆಪಿ ಸಭೆ ಸ್ಥಳಾಂತರವಾಗಿದೆ. ಮಂಗಳೂರು ಏರ್ ಪೋರ್ಟ್ ಬಳಿಯೇ ಪಕ್ಷದ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಆದರೆ, ಒಟ್ಟಾರೆಯಾಗಿ ಕೇಂದ್ರ ಸಚಿವ ಅಮಿತ್ ಶಾ ಅವರ ರೋಡ್ ಶೋ ಕಾರ್ಯಕ್ರಮಕ್ಕಿಂತ ನಮ್ಮೆಲ್ಲರನ್ನು ಕಾಪಾಡುವ ದೈವ ಕೊರಗಜ್ಜನ ಕೋಲವೇ ಮುಖ್ಯವೆಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಿರ್ಧಾರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅಮಿತ್ ಶಾ ಮಿಂಚಿನ ಸಂಚಾರ ಇರಲಿದ್ದು, ಸುಮಾರು 5.30 ಗಂಟೆಗಳ ಕಾಲ ಹಲವೆಡೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.15ಕ್ಕೆ ಕೇರಳದ ಕಣ್ಣೂರು ಏರ್ ಪೋರ್ಟ್ ನಿಂದ ಸೇನಾ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಲಿರುವ ಅಮಿತ್ ಶಾ, ಮಧ್ಯಾಹ್ನ 2.45 ಪುತ್ತೂರಿನ ಈಶ್ವರಮಂಗಳದ ಗಜಾನನ ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ. ನಂತರ ಹೆಲಿಪ್ಯಾಡ್ ನಿಂದ ರಸ್ತೆ ಮಾರ್ಗವಾಗಿ ಈಶ್ವರ ಮಂಗಳ ಹನುಮಗಿರಿ ದೇವಸ್ಥಾನ ಭೇಟಿ ನೀಡಿ ಪೂಜೆ ಸಲ್ಲಿಸಿ 3 ಗಂಟೆಗೆ ಈಶ್ವರಮಂಗಳದ ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನದ ಭಾರತ್ ಮಾತಾ ಮಂದಿರ ಉದ್ಘಾಟನೆ ಮಾಡಲಿದ್ದಾರೆ.
ನಂತರ ರಸ್ತೆ ಮಾರ್ಗವಾಗಿ ಗಜಾನನ ಶಾಲಾ ಮೈದಾನದತ್ತ ಸಾಗಿ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ ಪುತ್ತೂರಿನ ಮೊಟ್ಟೆತ್ತಡ್ಕದ ಗೇರು ಅಭಿವೃದ್ಧಿ ನಿಗಮದ ಎದುರಿನ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಲಿದೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಪುತ್ತೂರಿನ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮೈದಾನ ತಲುಪಲಿರುವ ಅಮಿತ್ ಶಾ ಸಂಜೆ 5 ಗಂಟೆಯವರೆಗೆ ಕ್ಯಾಂಪ್ಕೋ ಸುವರ್ಣ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.