ಕೇರಳ ಸ್ಟೋರಿ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದ ಮಧ್ಯಪ್ರದೇಶ ಸಿಎಂ
ಯುವ ಭಾರತ ಸುದ್ದಿ ಭೋಪಾಲ್:
ದಿ ಕೇರಳ ಸ್ಟೋರಿ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಸಿನಿಮಾವು ಭಯೋತ್ಪಾದಕರ ಮುಖವಾಡವನ್ನು ಕಳಚಿಹಾಕಿದೆ’ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚೌಹಾಣ್ ಈ ನಿರ್ಧಾರ ಪ್ರಕಟಿಸಿದ್ದಾರೆ.
‘ರಾಜ್ಯದಲ್ಲಿ ಈಗಾಗಲೇ ಮತಾಂತರ ವಿರೋಧಿ ಕಾನೂನನ್ನು ಜಾರಿ ಮಾಡಲಾಗಿದೆ. ಈ ಚಿತ್ರವು ಮತಾಂತರದ ವಿರುದ್ಧ ಅರಿವು ಮೂಡಿಸುತ್ತದೆ. ಪೋಷಕರು, ಮಕ್ಕಳು ಸೇರಿದಂತೆ ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡಬೇಕು. ಹಾಗಾಗಿ ರಾಜ್ಯದಲ್ಲಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ’ ಎಂದು ಹೇಳಿದರು.
‘ಚಿತ್ರವು ‘ಲವ್ ಜಿಹಾದ್’, ಮತಾಂತರ ಮತ್ತು ಭಯೋತ್ಪಾದನೆಯ ಕರಾಳ ಮುಖವನ್ನು ಬಯಲಿಗೆಳೆದಿದೆ. ಹೆಣ್ಣುಮಕ್ಕಳು ‘ಲವ್ ಜಿಹಾದ್’ ಜಾಲಕ್ಕೆ ಸಿಲುಕಿ ತಮ್ಮ ಬದುಕನ್ನು ಹೇಗೆ ಹಾಳು ಮಾಡಿಕೊಳ್ಳುತ್ತಾರೆ ಎಂಬ ಕಥಾಹಂದರವೂ ಇದರಲ್ಲಿದೆ’ ಎಂದು ಹೇಳಿದರು.