ಹೊರನಾಡು ಕನ್ನಡಿಗರ ಶೈಕ್ಷಣಿಕ, ಉದ್ಯೋಗ ಸಮಸ್ಯೆ ಕುರಿತು ಸಭೆ
ಯುವ ಭಾರತ ಸುದ್ದಿ ಬೆಂಗಳೂರು :
ಹೊರನಾಡು ಕನ್ನಡಿಗರು ಎದುರಿಸುತ್ತಿರುವ ಶೈಕ್ಷಣಿಕ
ಮತ್ತು ಉದ್ಯೋಗ ಸಮಸ್ಯೆಗಳನ್ನು ಚರ್ಚಿಸಲು ಇಂದು ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ
ಪ್ರಾಧಿಕಾರದ ಕಚೇರಿಯಲ್ಲಿ ನೆರೆಯ ಆರು ರಾಜ್ಯಗಳ ಕನ್ನಡ ಪರ ಸಂಘಟನೆಗಳ ಸಭೆ ನಡೆಯಿತು.
ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಅಧ್ಯಕ್ಷತೆಯಲ್ಲಿ ನಡೆದ ಇಂದಿನ ಸಭೆಯಲ್ಲಿ ಮಹಾರಾಷ್ಟ್ರ, ಗೋವೆ,ಆಂಧ್ರಪ್ರದೇಶ,ತೆಲಂಗಾಣ,
ತಮಿಳುನಾಡು ಹಾಗೂ ಕೇರಳದ ಸುಮಾರು 50 ಕ್ಕೂ ಹೆಚ್ಚು ಪ್ರಮುಖರು ಪಾಲ್ಗೊಂಡು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕಳೆದ ಡಿಸೆಂಬರ್ 27 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹಾಗೂ ಜತ್ತ ಕನ್ನಡಿಗರು ಭೆಟ್ಟಿಯಾಗಿ ಹೊರನಾಡ ಕನ್ನಡಿಗರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಡಾ.ಸೋಮಶೇಖರ ಅವರು ಇಂದಿನ ಸಭೆ ಕರೆದಿದ್ದರು.
ಹೊರನಾಡ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕೈಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಾಧಿಕಾರವು ವರದಿಯನ್ನು ಶೀಘ್ರವೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದೆ.
ಇಂದಿನ ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತಿಹಳ್ಳಿ ಪ್ರಕಾಶ, ಬೆಳಗಾವಿಯ ಹಿರಿಯ ಕನ್ನಡ
ಹೋರಾಟಗಾರ ಅಶೋಕ ಚಂದರಗಿ ಪಾಲ್ಗೊಂಡಿದ್ದರು.