28 ರಿಂದ ರಾಜ್ಯದಲ್ಲಿ ಒಂದು ವಾರ ಮೋದಿ 20 ಕ್ಕೂ ಹೆಚ್ಚು ಸಮಾವೇಶದಲ್ಲಿ ಭಾಗಿ
ಯುವ ಭಾರತ ಸುದ್ದಿ ದೆಹಲಿ :
ಕರ್ನಾಟಕ ವಿಧಾನಸಭಾ ಚುನಾವಣೆ ಇದೀಗ ಕಾವೇರಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಇದೀಗ ರಂಗೇರಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಚುನಾವಣೆಗೆ ರಣಕಹಳೆ ಮೊಳಗಿಸಲು ಆಗಮಿಸಲಿದ್ದಾರೆ.
ರಾಜ್ಯಾದ್ಯಂತ ಸುಮಾರು 20 ಕ್ಕೂ ಹೆಚ್ಚು ಸಭೆ- ಸಮಾರಂಭಗಳಲ್ಲಿ ಮೋದಿ ಮಾತನಾಡಲಿದ್ದಾರೆ. ಸಭೆಯ ಕುರಿತು ಪಕ್ಷದಲ್ಲಿ ಚರ್ಚೆ ನಡೆದಿದೆ. ಒಂದೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮೋದಿ ಅವರನ್ನು ಹೆಚ್ಚು ಹೆಚ್ಚು ಪ್ರಚಾರದಲ್ಲಿ ಬಳಸಿಕೊಳ್ಳಲು ರಾಜ್ಯನಾಯಕರು ತೀರ್ಮಾನಿಸಿದ್ದಾರೆ. ಮೋದಿ ಅವರೊಂದಿಗೆ ರಾಜ್ಯ ಮತದಾರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಕರೆತಂದು ಪ್ರಚಾರದಲ್ಲಿ ಸಮರ್ಥವಾಗಿ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ದಾ ಸೇರಿದಂತೆ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಒಟ್ಟು 10 ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರ್ನಾಟಕ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ಬಿಜೆಪಿ ರಾಷ್ಟ್ರೀಯ ಘಟಕ ಮತ್ತು ಪ್ರಧಾನಮಂತ್ರಿ ಕಚೇರಿಗೆ ಈಗಾಗಲೇ ಪತ್ರ ಬರೆದಿದೆ.