Breaking News

ಮೂಡ್ ಆಫ್ ನೇಶನ್ ಸಮೀಕ್ಷೆ : ಮೋದಿಗೆ ಶೇಕಡಾ 67 ರಷ್ಟು ಜನ ಬೆಂಬಲ

Spread the love

ಮೂಡ್ ಆಫ್ ನೇಶನ್ ಸಮೀಕ್ಷೆ : ಮೋದಿಗೆ ಶೇಕಡಾ 67 ರಷ್ಟು ಜನ ಬೆಂಬಲ

ಯುವ ಭಾರತ ಸುದ್ದಿ ದೆಹಲಿ :
ಕೇಂದ್ರ ನಾಯಕತ್ವ ಕುರಿತು ಇಂಡಿಯಾ ಟುಡೇ ಮತ್ತು ಚಾಣಕ್ಯ ನಡೆಸಿದ್ದ 2023ರ ಮೂಡ್ ಆಫ್ ದಿ ನೇಷನ್ ರಿಪೋರ್ಟ್ ಕಾರ್ಡ್ ಬಿಡುಗಡೆಯಾಗಿದೆ. 67 ಶೇಕಡಾ ಜನ ನರೇಂದ್ರ ಮೋದಿಯವರ ಪರವಾಗಿ, ಶೇಕಡಾ 24 ರಷ್ಟು ಜನ ಕೇಜ್ರಿವಾಲ್ ಮತ್ತು ಶೇಕಡಾ 13 ರಷ್ಟು ಜನ ರಾಹುಲ್ ಗಾಂಧಿಗೆ ಬೆಂಬಲ ನೀಡಿದ್ದಾರೆ. ಸಂವಿಧಾನದ ವಿಧಿ 370 ರದ್ದತಿ ಮತ್ತು ಏಕರೂಪ ನಾಗರಿಕ ಸಂಹಿತೆಯಂಥ ನಿರ್ಧಾರಗಳಿಗೆ ಜನ ಮನಸೋತಿದ್ದಾರೆ. 2024 ರಲ್ಲೂ ಮೋದಿಗೆ ಜನ ಬೆಂಬಲ ಸಿಗಲಿದೆ ಎನ್ನುತ್ತಿದೆ ಈ ಸಮೀಕ್ಷೆ. ಪ್ರಧಾನಿಯಾಗಿ 9ನೇ ವರ್ಷ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರ ಜನಪ್ರಿಯತೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಕಳೆದ ಆಗಸ್ಟ್ ನಲ್ಲಿ ಮೋದಿ ಅವರ ಜನಪ್ರಿಯತೆ 56 ರಷ್ಟು ಇತ್ತು. ಇದೀಗ ಅವರ ಜನಪ್ರಿಯತೆ 67ಕ್ಕೆ ಏರಿಕೆ ಕಂಡಿದೆ ಎಂದು ಸಮೀಕ್ಷೆ ತಿಳಿಸಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಮುಂದಿದ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಜನಪ್ರಿಯತೆ ಮತ್ತಷ್ಟು ಹೆಚ್ಚಿರುವುದು ಆ ಪಕ್ಷಕ್ಕೆ ದೊಡ್ಡ ಬೋನಸ್. ವಿಪಕ್ಷಗಳ ಪಾಲಿಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ. ಈಗ ಚುನಾವಣೆ ನಡೆದರೆ ಲೋಕಸಭೆಯಲ್ಲಿ ಬಿಜೆಪಿ 284 ಸ್ಥಾನ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 153 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ನುಡಿದಿದೆ.
ಮೋದಿಗೆ ಎಷ್ಟು ಅಂಕ ?
ಹಿಂದಿ ವಾಹಿನಿ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ನಡೆಸಿದ್ದು, ಇದರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಾರ್ಯವೈಖರಿ ಬಗ್ಗೆ ದೇಶದ ಜನರ ಚಿತ್ತ ಅರಿಯುವ ಪ್ರಯತ್ನ ನಡೆಸಲಾಗಿದೆ. ಜನವರಿ 2023 ರಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದಾರೆ. ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಜನರು ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಮೋದಿ ಸರ್ಕಾರದ ಒಟ್ಟಾರೆ ಕಾರ್ಯವೈಖರಿಯಿಂದ ನೀವು ಎಷ್ಟು ತೃಪ್ತರಾಗಿದ್ದೀರಿ, ಎನ್‌ಡಿಎ ಸರ್ಕಾರದ ದೊಡ್ಡ ಸಾಧನೆ ಏನು ಮತ್ತು ಮೋದಿ ಸರ್ಕಾರದ ದೊಡ್ಡ ವೈಫಲ್ಯ ಯಾವುದು ಎಂದು ಜನರನ್ನು ಪ್ರಶ್ನೆ ಮಾಡಲಾಗಿದೆ. ಅದರೊಂದಿಗೆ ಸಾಕಷ್ಟು ವಿವಾದಿತ ವಿಷಯಗಳಲ್ಲಿ ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆಯೂ ಪ್ರಶ್ನೆ ಮಾಡಲಾಗಿದೆ. ಕೆಲವು ಪ್ರಮುಖ ವಿಚಾರಗಳಲ್ಲಿ ದೇಶದ ಮನಸ್ಥಿತಿ ಹೇಗಿತ್ತು ಹಾಗೂ ಅವರ ಅಭಿಪ್ರಾಯ ಏನು ಎನ್ನುವುದರ ವಿವರ ಇಲ್ಲಿದೆ.

ಕೊರೋನಾ ನಿಯಂತ್ರಣ ಮೋದಿ ಸರ್ಕಾರದ ದೊಡ್ಡ ಸಾಧನೆ: ಮೂಡ್‌ ಆಫ್‌ ದ ನೇಷನ್‌ ಸರ್ವೇಯಲ್ಲಿ ಶೇ. 67ರಷ್ಟು ಮಂದಿ ಮೋದಿ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರೆ, ಶೇ.11 ರಷ್ಟು ಮಂದಿ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಇನ್ನು ಶೇ. 18 ರಷ್ಟು ಮಂದಿ ಮೋದಿ ಸರ್ಕಾರದ ಕೆಲಸ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. ಕರೋನಾ ವಿರುದ್ಧದ ಹೋರಾಟದ ವಿಜಯವನ್ನು ಜನರು ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಪರಿಗಣಿಸಿದ್ದಾರೆ. 20 ರಷ್ಟು ಜನರು ಕರೋನಾವನ್ನು ನಿಭಾಯಿಸಿದ್ದೇ ಮೋದಿ ಸರ್ಕಾರದ ದೊಡ್ಡ ಯಶಸ್ಸು ಎಂದಿದ್ದಾರೆ. 14 ಪ್ರತಿಶತ ಜನರು 370 ನೇ ವಿಧಿಯನ್ನು ತೆಗೆದುಹಾಕಿದ್ದೇ ದೊಡ್ಡ ಸಾಧನೆ ಎಂದಿದ್ದಾರೆ. 11 ಪ್ರತಿಶತದಷ್ಟು ಜನರು ರಾಮ ಮಂದಿರ ನಿರ್ಮಾಣ ಮತ್ತು 8 ಪ್ರತಿಶತ ಜನರು ಜನ ಕಲ್ಯಾಣ ಯೋಜನೆ ಮೋದಿ ಸರ್ಕಾರದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ.

ಇದೇ ವೇಳೆ ಮೋದಿ ಸರ್ಕಾರದ ದೊಡ್ಡ ವೈಫಲ್ಯ ಯಾವುದು ಎನ್ನುವ ಪ್ರಶ್ನೆಗೆ ಶೇ. 25ರಷ್ಟು ಜನರು ಹಣದುಬ್ಬರ ಎಂದು ಹೇಳಿದ್ದರೆ, ಶೇ. 17ರಷ್ಟು ಮಂದಿ ನಿರುದ್ಯೋಗ ಎಂದಿದ್ದಾರೆ. ಕೋವಿಡ್‌-19 ವಿಚಾರದಲ್ಲಿ ಸರ್ಕಾರದ ಹೋರಾಟವನ್ನು ವಿಫಲವಾಗಿದೆ ಎಂದು ಶೇ. 8ರಷ್ಟು ಮಂದಿ ಹೇಳಿದ್ದಾರೆ. ಇನ್ನು ಆರ್ಥಿಕ ಅಭಿವೃದ್ಧಿ ವೈಫಲ್ಯ ಎಂದು ಶೇ. 6ರಷ್ಟು ಮಂದಿ ಹೇಳಿದ್ದಾರೆ. ಇನ್ನು ವಿರೋಧಪಕ್ಷವಾಗಿ ಕಾಂಗ್ರೆಸ್‌ನ ಕೆಲಸ ಯಾವ ರೀತಿ ಇದೆ ಎನ್ನುವ ಪ್ರಶ್ನೆಗೆ, ಶೇ.19ರಷ್ಟು ಜನರು ಅತ್ಯುತ್ತಮ ಎಂದು ಹೇಳಿದ್ದರೆ, ಶೇ.15ರಷ್ಟು ಜನ ಉತ್ತಮ ಎಂದಿದ್ದಾರೆ, ಶೇ.19ರಷ್ಟು ಮಂದಿ ಸರಾಸರಿ ಎಂದಿದ್ದರೆ, ಶೇ.25ರಷ್ಟು ಮಂದಿ ಕೆಟ್ಟದಾಗಿದೆ ಎಂದಿದ್ದಾರೆ.

ಭಾರತ್‌ ಜೋಡೋ ಯಾತ್ರೆಯ ಬಗ್ಗೆಯೂ ಜನ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಶೇ. 27ರಷ್ಟು ಮಂದಿ ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಲ್ಲದೆ, ಜನರೊಂದಿಗೆ ಕನೆಕ್ಟ್‌ ಆಗಿರಲು ಉತ್ತಮ ಮಾರ್ಗ ಎಂದಿದ್ದಾರೆ. ಇನ್ನು ಶೇ. 37ರಷ್ಟು ಮಂದಿ ಪಕ್ಷವನ್ನು ಬಲಪಡಿಸಲು ಇದು ಉಪಯುಕ್ತ ಎಂದಿದ್ದಾರೆ. ಇನ್ನು ಶೇ. 13ರಷ್ಟು ಮಂದಿ ಮಾತ್ರವೇ ಇದರಿಂದ ರಾಹುಲ್‌ ಗಾಂಧಿ ಇಮೇಜ್‌ ಹೆಚ್ಚಾಗಲಿದೆ ಎಂದಿದ್ದಾರೆ. ಶೇ. 9 ಮಂದಿ ಮಾತ್ರವೇ ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ ಎಂದಿದ್ದಾರೆ.
ಇನ್ನು ಕಾಂಗ್ರೆಸ್‌ ಪಕ್ಷದಲ್ಲಿ ಬದಲಾವಣೆ ತರಲು ಯಾರು ಸೂಕ್ತ ಎನ್ನುವ ಪ್ರಶ್ನೆಗೆ, ಶೇ. 26ರಷ್ಟು ಮಂದಿ ರಾಹುಲ್‌ ಗಾಂಧಿ ಎಂದು ಹೇಳಿದ್ದರೆ, ಶೇ. 16ರಷ್ಟು ಮಂದಿ ಸಚಿನ್‌ ಪೈಲಟ್‌, ಶೇ.12ರಷ್ಟು ಮಂದಿ ಮನಮೋಹನ್‌ ಸಿಂಗ್‌, ಶೇ. 8ರಷ್ಟು ಮಂದಿ ಪ್ರಿಯಾಂಕಾ ಗಾಂಧಿ ಎಂದು ಹೇಳಿದ್ದರೆ ಶೇ. 3ರಷ್ಟು ಮಂದಿ ಮಾತ್ರವೇ ಹಾಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಹೆಸರು ತೆಗೆದುಕೊಂಡಿದ್ದಾರೆ.

ನಾಯಕರಾಗಿ ಯಾರು ಸೂಕ್ತ ಎನ್ನುವ ಪ್ರಶ್ನೆಗೆ, ಶೇ. 24ರಷ್ಟು ಮಂದಿ ಅರವಿಂದ್‌ ಕೇಜ್ರಿವಾಲ್‌ ಹೆಸರು ಹೇಳಿದ್ದರೆ, ಶೇ. 20ರಷ್ಟು ಮಂದಿ ಮಮತಾ ಬ್ಯಾನರ್ಜಿ, ಶೇ. 13ರಷ್ಟು ಮಂದಿ ರಾಹುಲ್‌ ಗಾಂಧಿ ಹಾಗೂ ಶೇ. 5ರಷ್ಟು ಮಂದಿ ನವೀನ್‌ ಪಟ್ನಾಯಕ್‌ ಹೆಸರನ್ನು ತೆಗೆದುಕೊಂಡಿದ್ದಾರೆ.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

19 − 15 =