ಅನುತ್ತೀರ್ಣರಾದ ಪಿಯುಸಿ ವಿದ್ಯಾರ್ಥಿಗಳಿಗೆ ಸೂಚನೆ
ಯುವ ಭಾರತ ಸುದ್ದಿ ಬೆಂಗಳೂರು :
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಪ್ರಕಟಣೆ ಹೊರಡಿಸಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಏಪ್ರಿಲ್ 27 ರೊಳಗೆ ಅರ್ಜಿ ಸಲ್ಲಿಸಬೇಕು.
ಪುನರಾವರ್ತಿತರು ಅರ್ಜಿ ಸಲ್ಲಿಸುವ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಹೊರಡಿಸಿರುವ ಸುತ್ತೋಲೆಯಲ್ಲಿ, ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಶುಲ್ಕ ಪಾವತಿಸಲು ಏಪ್ರಿಲ್ 21ರಿಂದ 28ರವರೆಗೆ ಅವಕಾಶ ಕಲ್ಪಿಸಲಾಗಿದೆ. ಮೇ 4ರ ಒಳಗೆ ದಂಡ ಸಹಿತ ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವವರು ಮರು ಮೌಲ್ಯಮಾಪನದ ಫಲಿತಾಂಶಕ್ಕೆ ಕಾಯುವ ಅಗತ್ಯವಿಲ್ಲ ಎಂದು ಕೆಎಸ್‌ಇಎಬಿ ಅಧ್ಯಕ್ಷ ರಾಮಚಂದ್ರನ್ ಹೇಳಿದ್ದಾರೆ.
ಫಲಿತಾಂಶದ ಪ್ರತಿಯನ್ನು ಪಿಯು ಪರೀಕ್ಷಾ ಪೋರ್ಟಲ್ ಮೂಲಕ ಆಯಾ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದಿಲ್ಲ. ಮಂಡಳಿ ನೀಡಿದ ಫಲಿತಾಂಶದ ಪಟ್ಟಿ ಆಧಾರದಲ್ಲಿ ಹಾಗೂ ಉತ್ತೀರ್ಣರಾದವರು ಫಲಿತಾಂಶ ತಿರಸ್ಕರಿಸಿ, ಫಲಿತಾಂಶದ ಪ್ರತಿ ಸಲ್ಲಿಸಿ ಪೂರಕ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಉಳಿದ ವಿದ್ಯಾರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ, ಒಂದು ವಿಷಯಕ್ಕೆ-140 ರೂಪಾಯಿ. ಎರಡು ವಿಷಯಕ್ಕೆ- 270 ರೂಪಾಯಿ. ಮೂರು ಅಥವಾ ಹೆಚ್ಚಿನ ವಿಷಯಗಳು- 400 ರೂಪಾಯಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ಪಡೆಯಬೇಕಾದ ಅಂಕಪಟ್ಟಿ ಶುಲ್ಕ- 50 ರೂಪಾಯಿ ಪಾವತಿಸಬೇಕಾಗಿದೆ.