4 ಸಾವಿರ ಬಸ್ ಖರೀದಿ, 13 ಸಾವಿರ ಸಿಬ್ಬಂದಿ ನೇಮಕ
ಬೆಂಗಳೂರು:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 4,000 ಬಸ್‌ಗಳನ್ನು ಖರೀದಿಸಲಾಗುವುದು ಮತ್ತು 13,000 ಚಾಲಕರು, ಕಂಡಕ್ಟರ್‌ಗಳು ಮತ್ತು ಮೆಕಾನಿಕ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ರಾಜ್ಯದ ಮಹಿಳೆಯರು ಖುಷಿಯಿಂದ ಸ್ವಾಗತಿಸಿದ್ದು, ಒಂದು ತಿಂಗಳಲ್ಲಿ 18 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಕೆಲವು ಕಡೆ ಬಸ್‌ಗಳ ಕೊರತೆ ಇದೆ ಎಂಬ ಮಾಹಿತಿ ಬಂದಿದೆ. ಇದಕ್ಕಾಗಿ ಸಾರಿಗೆ ಇಲಾಖೆಯಲ್ಲಿ 13 ಸಾವಿರ ಹುದ್ದೆ ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ಮೇಲೆ ಉತ್ತರಿಸಿದ ಅವರು, “ಕುಮಾರಸ್ವಾಮಿ ಅವರು ಶಕ್ತಿ ಯೋಜನೆಯಿಂದಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ.
ಪುರುಷ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೊಸದಾಗಿ ನಾಲ್ಕು ಸಾವಿರ ಬಸ್‌ಗಳ ಖರೀದಿ ಮಾಡಲು ನಿರ್ಧರಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಾಗಿ ಪ್ರಯಾಣ ಮಾಡುತ್ತಿರುವುದರಿಂದ ಎಲ್ಲಾ ಬಸ್‌ಗಳು ರಶ್ ಆಗುತ್ತಿವೆ. ಇದಕ್ಕೆ ಪರಿಹಾರಕ್ಕೆ ಮುಂದಾಗಿರುವ ಸರ್ಕಾರ ಹೊಸದಾಗಿ 4,000 ಬಸ್‌ಗಳ ಖರೀದಿ ಮತ್ತು ಕಾರ್ಯಾಚರಣೆಗಾಗಿ 13,000 ಸಾರಿಗೆ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ.