Breaking News

ಸಂಚಲನ ಮೂಡಿಸಿದ ಪುತ್ತಿಲ ಪ್ರಣಾಳಿಕೆ..!

Spread the love

ಸಂಚಲನ ಮೂಡಿಸಿದ ಪುತ್ತಿಲ ಪ್ರಣಾಳಿಕೆ..!

ಹಿಂದೂ ನೇತಾರ, ಪುತ್ತೂರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಹಿಂದುತ್ವದ ರಕ್ಷಣೆ ಜತೆಗೆ ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ 31 ವಿಷಯಾಧಾರಿತ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.
ಪುತ್ತೂರು ದರ್ಬೆ ಸುಭದ್ರ ಕಲ್ಯಾಣ ಮಂಟಪದ ಬಳಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.
ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಅಂಶಗಳನ್ನು ಜಾರಿಗೆ ಎಲ್ಲಾ ಕ್ರಮಗಳನ್ನು ಶಾಸಕನಾಗಿ ಆಯ್ಕೆಯಾದರೆ ಕೈಗೊಳ್ಳುವುದಾಗಿ ತಿಳಿಸಿದರು.
ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಕೆಲವರು ಮಾಡುತ್ತಿದ್ದು, ಈ ಬಗ್ಗೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಣೆ-ಪ್ರಮಾಣಕ್ಕೂ ಸಿದ್ಧ ಎಂದು ಹೇಳಿದರು.

 

ಪುತ್ತೂರು :
ಪುತ್ತೂರು ವಿಧಾನಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಇದೀಗ ಮತ್ತೊಮ್ಮೆರಾಜ್ಯದ ಗಮನ ಸೆಳೆದಿದ್ದಾರೆ. ಬಿಜೆಪಿಯಿಂದ ಟಿಕೆಟ್ ವಂಚಿತರಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳ ಅಪೇಕ್ಷೆಯಂತೆ ಪಕ್ಷೇತರರಾಗಿ ರಣಕಹಳೆ ಮೊಳಗಿಸಿದ್ದಾರೆ. ಅವರು ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರ ನಾಮಪತ್ರ ಸಲ್ಲಿಕೆಗೆ ಜನಸಾಗರವೇ ನೆರೆದಿತ್ತು.

ಪುತ್ತೂರಿನಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಕುಮಾರ್ ರೈ ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ನಡುವೆ ನೇರ ಹಣಾಹಣಿ ನಡೆಯುತ್ತಿದೆ. ಅದರಲ್ಲೂ ಪುತ್ತಿಲ ಹಾಗೂ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ನಡುವೆ ನೇರ ಸ್ಪರ್ಧೆ ಕಂಡುಬಂದಿದೆ. ಮೇಲ್ನೋಟಕ್ಕೆ ಇವರಿಬ್ಬರ ನಡುವೆಯೇ ಸ್ಪರ್ಧೆ ಏರ್ಪಟ್ಟಂತಿದೆ. ಬಿಜೆಪಿ- ಸಂಘ ಪರಿವಾರದಿಂದ ಸಾಕಷ್ಟು ಒತ್ತಡಗಳು ಬಂದರೂ ಬಹು ಜನರ ಒತ್ತಾಯಕ್ಕೆ ಮಣಿದು ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಗೆ ಅಣಿಯಾಗಿದ್ದಾರೆ.

ಇದೀಗ ಪಕ್ಷೇತರ ಅಭ್ಯರ್ಥಿ ಪುತ್ತಿಲ ಪುತ್ತೂರಿನ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಇದು ಸಂಚಲನಕ್ಕೆ ಕಾರಣವಾಗಿದೆ. ರಾಜಕೀಯ ಹಾಗೂ ಪ್ರಾದೇಶಿಕ ಪಕ್ಷಗಳಿಂದ ಸ್ಪರ್ಧೆ ಮಾಡಿದ್ದರೆ ಆ ಪಕ್ಷಗಳ ಅಣತಿಯಂತೆ ಪ್ರಣಾಳಿಕೆ ಸಿದ್ಧಪಡಿಸಬೇಕಿತ್ತು. ಆದರೆ, ಪುತ್ತಿಲ ಅವರಿಗೆ ರಾಜಕೀಯ ಪಕ್ಷಗಳ ಹಂಗಿಲ್ಲ. ಹೀಗಾಗಿ, ಪುತ್ತೂರು ಜನರ ಆಶಯದಂತೆ ಅವರ ಪ್ರಣಾಳಿಕೆ ರೂಪುಗೊಂಡಿದೆ. ಬಹುದಿನಗಳ ಬೇಡಿಕೆಯಾಗಿರುವ ಪುತ್ತೂರು ಜಿಲ್ಲೆ ರಚನೆಯನ್ನು ಅವರು ಪ್ರಣಾಳಿಕೆಯಲ್ಲಿ ಒತ್ತು ನೀಡಿದ್ದಾರೆ. ಜೊತೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಜೊತೆಗೆ ಕಳೆದ ವರ್ಷ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ಉದ್ಯೋಗ ತರಬೇತಿ ಕೇಂದ್ರ ಹಾಗೂ ಸೈನಿಕ ತರಬೇತಿ ಕೇಂದ್ರ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ವಿಟ್ಲ ತಾಲೂಕು ರಚನೆ, ಪರಿಸರ ಸ್ನೇಹಿ ಸಸ್ಯಗಳ ನಾಟಿ, ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸುವುದು, ಐಟಿ ಹಬ್, ಕೈಗಾರಿಕೆ ಸ್ಥಾಪನೆ, ಕೋಟಿ ಚನ್ನಯ್ಯ ಥೀಮ್ ಪಾರ್ಕ್, ದಿವಂಗತ ಸೌಮ್ಯ ಭಟ್ ಸ್ಮರಣಾರ್ಥ ಯುವತಿಯರಿಗೆ ಸ್ವ ಉದ್ಯೋಗ ತರಬೇತಿ ಕೇಂದ್ರ, ದಿವಂಗತ ಕಾರ್ತಿಕ್ ಮೆರ್ಲ ಸ್ಮರಣಾರ್ಥ ಸರ್ಕಾರಿ ಐಟಿಐ ಸ್ಥಾಪನೆ, ಪ್ರವೀಣ್ ನೆಟ್ಟಾರು ಸ್ಮರಣಾರ್ಥ ಯುವಕರಿಗೆ ಸ್ವಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ ಮತ್ತು ಸೈನ್ಯಕ್ಕೆ ಸೇರಲು ತರಬೇತಿ ವ್ಯವಸ್ಥೆ, ಭ್ರಷ್ಟಾಚಾರ ಲಂಚ ರಹಿತ ಜನಸ್ನೇಹಿ ಆಡಳಿತ ವ್ಯವಸ್ಥೆ, ಜನವಿರೋಧಿ ಕಾನೂನುಗಳ ರದ್ದತಿ, ಜಿಲ್ಲಾ ಕೇಂದ್ರವಾಗಿಸಲು ಕ್ರಮ, ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ, ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹಲವು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವ ಮೂಲಕ ಪುತ್ತೂರು ವಿಧಾನಸಭಾ ಮತಕ್ಷೇತ್ರದ ಜನತೆಯ ಮನೆಗೆಲ್ಲಲು ಮುಂದಾಗಿದ್ದಾರೆ.

*ಪುತ್ತೂರಿಗೆ ಪುತ್ತಿಲರ ಪ್ರಣಾಳಿಕೆ ಏನು ?*

1. ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಸರಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರ / ಲಂಚ ರಹಿತ ಜನಸ್ನೇಹಿ ಆಡಳಿತ ವ್ಯವಸ್ಥೆ ಜನ ವಿರೋಧಿ ಕಾನೂನುಗಳ ರದ್ದತಿಗೆ ಕ್ರಮ

2. ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿಸಲು ಹಾಗೂ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳ ಸ್ಥಳಾಂತರಕ್ಕೆ ಕ್ರಮ

3. ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹಾಗೂ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಎಲ್ಲಾ ಕ್ರಮ.

4. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಕ್ರಮ

5. ವಿಟ್ಲವನ್ನು ತಾಲೂಕು ಕೇಂದ್ರ ಮಾಡುವ ಸಂಕಲ್ಪ – ಶಾಸಕರ ಕಛೇರಿ ಪ್ರಾರಂಭ ಹಾಗೂ ವಾರದಲ್ಲಿ ಎರಡು ದಿನ ಈ ಕಛೇರಿಯಿಂದ ಕಾರ್ಯ ನಿರ್ವಹಣೆ .

6. 400KV ಉಡುಪಿ – ಕಾಸರಗೋಡು ವಿದ್ಯುತ್ ಮಾರ್ಗವು ರೈತರ ಜಮೀನಿನಲ್ಲಿ ಹಾದು ಹೋಗದಂತೆ ಕ್ರಮ .

7. ಅಡಿಕೆ , ತೆಂಗು , ರಬ್ಬರ್ , ಕೋಕೋ ಮುಂತಾದ ಬೆಳೆಗಳ ಮೌಲ್ಯವರ್ಧನೆ , ರೋಗ ನಿರ್ವಹಣೆ , ಸಂಶೋಧನೆಗೆ ಕ್ರಮ

8. ವ್ಯವಸ್ಥಿತವಾಗಿ ಕ್ಷೇತ್ರದಾದ್ಯಂತ ಅಣೆಕಟ್ಟುಗಳ ನಿರ್ಮಾಣ , ನಿರ್ವಹಣೆಗೆ ಕ್ರಮ

 

9. 11E ನಕ್ಷೆ ಶುಲ್ಕ ಕಡಿತ , ಅಕ್ರಮ ಸಕ್ರಮ ಪ್ಲಾಟಿಂಗ್ ಸಮಸ್ಯೆಗೆ ಪರಿಹಾರ , ಅಕ್ರಮ ಸಕ್ರಮ , ಕುಮ್ಮಿ ಹಕ್ಕು 94c , 94CC ಮಂಜೂರಾತಿಗೆ ಕ್ರಮ , ಭೂ ಪರಿವರ್ತನೆ ನಿಯಮ ಸರಳೀಕರಣ ಮತ್ತು ಶೀಘ್ರ ಅನುಮತಿಗೆ ವ್ಯವಸ್ಥೆ

10. ನಗರ ಪ್ರದೇಶದಲ್ಲಿ ಕಟ್ ಕನ್ವರ್ಷನ್ ಸಮಸ್ಯೆ ಪರಿಹಾರ , ನಿವೇಶನ ರಹಿತರಿಗೆ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಆದ್ಯತೆ ಹಾಗೂ ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ , ಟ್ರಾಫಿಕ್ ಸಮಸ್ಯೆಗೆ ಪರಿಹಾರ

11. ಪ್ರಾಕೃತಿಕ ಸಮತೋಲನಕ್ಕೆ ಪರಿಸರ ಸ್ನೇಹಿ ಸಸ್ಯಗಳ ನಾಟಿ ಬಗ್ಗೆ ಕ್ರಮ

12. ನಗರ ಪ್ರದೇಶಕ್ಕೆ ಸೂಕ್ತ ಒಳಚರಂಡಿ ವ್ಯವಸ್ಥೆ

13. ಕ್ಷೇತ್ರದಾದ್ಯಂತ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಕ್ರಮ

14. ತುಳುನಾಡಿನ ಕ್ರೀಡೆ , ಕಲೆ , ಸಂಸ್ಕೃತಿ ಪ್ರೋತ್ಸಾಹಕ್ಕೆ ಪ್ರತ್ಯೇಕ ಅಕಾಡೆಮಿ ಸ್ಥಾಪನೆ . ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿಸಲು ಪ್ರಯತ್ನ

15. ಉಚಿತ ಶಿಕ್ಷಣ ಒದಗಿಸುವ ಸರಕಾರಿ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಕ್ರಮ

16. ಕ್ಷೇತ್ರದ ವ್ಯಾಪ್ತಿಯಲ್ಲಿ ಐಟಿ ಹಬ್ ಸ್ಥಾಪಿಸಿ , ತಾಲೂಕು ಕೇಂದ್ರದಲ್ಲಿ ಉದ್ಯೋಗ ಮೇಳ ಯೋಜನೆಗೆ ಕ್ರಮ

17. ಹೋಬಳಿಗೊಂದು ಕೈಗಾರಿಕಾ ವಲಯ ರಚಿಸಿ , ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ .

18. ದೇಶೀಯ ಗೋ ತಳಿಗಳ ಸಂರಕ್ಷಣೆ , ಗೋಶಾಲೆಗಳ ಸ್ಥಾಪನೆ , ಪಶುಪಾಲನೆಗೆ ಪ್ರೋತ್ಸಾಹ .

19. ಎಂಡೋಸಲ್ಫಾನ್ ಸಂತ್ರಸ್ತರ ಆರೈಕೆ , ಕಲ್ಯಾಣಕ್ಕೆ ಸೂಕ್ತ ಯೋಜನೆ .

20. ರಿಕ್ಷಾ / ಟ್ಯಾಕ್ಸಿ ವಾಹನಗಳ ಚಾಲಕ ಮಾಲಕರ ಸಮಸ್ಯೆಗಳಿಗೆ ಪರಿಹಾರ .

21. ಪುತ್ತೂರು ತಾಲೂಕು ಕೇಂದ್ರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ .

22. ಕೋಟಿ ಚೆನ್ನಯ ಥೀಮ್ ಪಾರ್ಕ್ ನಿರ್ಮಾಣ .

23. ವಿಟ್ಲ ಉಪ್ಪಿನಂಗಡಿಯಲ್ಲಿ ಅಗ್ನಿಶಾಮಕ ಠಾಣೆ ರಚನೆಗೆ ಕ್ರಮ .

24. ಸುಸಜ್ಜಿತ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಹಾಗೂ ಕ್ರೀಡಾಳುಗಳ ತರಬೇತಿಗೆ ಸಮರ್ಪಕ ವ್ಯವಸ್ಥೆ .

25. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ .

26. ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಡಿಸ್ಥಳ ಮಂಜೂರಾತಿ , ಅಭಿವೃದ್ಧಿಗೆ ಸೂಕ್ತ ಕ್ರಮ .

27. ದಿ . ಸೌಮ್ಯಭಟ್ ಸ್ಮರಣಾರ್ಥವಾಗಿ ಯುವತಿಯರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ.

 

28. ದಿ . ಕಾರ್ತಿಕ್ ಮೇರ್ಲ ಸ್ಮರಣಾರ್ಥವಾಗಿ ಸರಕಾರಿ ಐಟಿಐ ಸ್ಥಾಪನೆ .

29. ದಿ . ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ಯುವಕರಿಗೆ ಸ್ವ- ಉದ್ಯೋಗ ತರಬೇತಿ ಕೇಂದ್ರ ಸ್ಥಾಪನೆ ಮತ್ತು ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಗೆ ವ್ಯವಸ್ಥೆ .

30. ಸರಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ , ಶಿಕ್ಷಣ ಇಲಾಖೆಯಲ್ಲಿ ಅತಿಥಿ ಉಪನ್ಯಾಸಕರು , ಗ್ರಾಮ ಸಹಾಯಕರ ಖಾಯಾಮತಿ ಬಗ್ಗೆ ಕ್ರಮ .

31. ಯುವಕರ , ಯುವತಿಯರ , ಮಹಿಳೆಯರ , ಶ್ರಮಜೀವಿಗಳ , ರೈತರ , ಹಿರಿಯರ , ಎಲ್ಲಾ ಸಮಸ್ಯೆಗಳಿಗೆ ಸಹಾಯವಾಣಿ ( Help Line ) ಮೂಲಕ ದಿನದ 24 ಗಂಟೆಯೂ ಸ್ಪಂದನೆ .


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

4 × four =