Breaking News

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ – ರಮೇಶ್ ಜಾರಕಿಹೊಳಿ..!!

Spread the love

ಕೇಂದ್ರದ ಅನುಮತಿ ಬಳಿಕ ಮೇಕೆದಾಟು ಅಣೆಕಟ್ಟು ನಿರ್ಮಾಣ – ರಮೇಶ್ ಜಾರಕಿಹೊಳಿ..!!

ಯುವ ಭಾರತ ಸುದ್ದಿ, ರಾಮನಗರ: ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ 9000 ಕೋಟಿ ರೂ.ಗಳ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಪಡೆದುಕೊಂಡ ಬಳಿಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.

ಯೋಜನೆಗೆ ಸಂಬಂಧಿಸಿದಂತೆ ಅರ್ಕಾವತಿ ಮತ್ತು ಕಾವೇರಿ ಸೇರುವ ಸಂಗಮ ಹಾಗೂ ಜಲಾಶಯ ನಿರ್ಮಿಸಲಾಗುವ ಉದ್ದೇಶಿತ ಒಂಟಿಗುಂಡ್ಲು ಪ್ರದೇಶಕ್ಕೆ ಇಂದು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಅಣೆಕಟ್ಟು ನಿರ್ಮಾಣವಾಗುವುದರಿಂದ ಸುಮಾರು 5051 ಹೆಕ್ಟೇರ್ ಅರಣ್ಯ ಭೂಮಿ ಮುಳುಗಡೆಯಾಗಲಿದೆ. ಹೀಗಾಗಿ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದರು.

ಪ್ರಸ್ತಾಪಿತ ಯೋಜನೆಗಾಗಿ ಒಟ್ಟಾರೆಯಾಗಿ 5252 ಹೆಕ್ಟೇರ್ ಪ್ರದೇಶದ ಅವಶ್ಯಕತೆ ಇದೆ. ಇದರಲ್ಲಿ 3181 ಹೆ. (ಶೇ. 63ರಷ್ಟು) ವನ್ಯಜೀವಿ ಪ್ರದೇಶವಾಗಿದೆ. 1870 ಹೆ. (ಶೇ. 37) ಮೀಸಲು ಅರಣ್ಯ ಪ್ರದೇಶವಾಗಿದ್ದರೆ 201 ಹೆಕ್ಟೇರ್ ಕಂದಾಯ ಪ್ರದೇಶವಾಗಿರುತ್ತದೆ. ಈ ಪೈಕಿ ಶೇ. 63ರಷ್ಟು ಪ್ರದೇಶ ವನ್ಯಜೀವಿ ಪ್ರದೇಶವಾಗಿರುವುದರಿಂದ ಕೇಂದ್ರದ ಪರಿಸರ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳವುದು ಅಗತ್ಯವಾಗಿದೆ ಎಂದು ವಿವರಿಸಿದರು.

*ಸಚಿವ ಸಂಪುಟದಲ್ಲಿ ಅನುಮತಿ:* ಪ್ರಸ್ತಾಪಿತ ಜಲಾಶಯಕ್ಕಾಗಿ ಈಗಾಗಲೇ ಪರಿಷ್ಕೃತ ವಿಸ್ತ್ರತ ಯೋಜನಾ ವರದಿಯನ್ನು (ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ – ಡಿಪಿಆರ್) ಸಿದ್ದಪಡಿ 2019ರ ಜನವರಿ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರದ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳಲ್ಲಿ ಪರಿಶೀಲನೆಯಲ್ಲಿದೆ. ಇವುಗಳಿಂದ ಅನುಮೋದನೆ ದೊರೆತ ತಕ್ಷಣವೆ ಡಿಪಿಆರ್ ಅನ್ನು ಸಚಿವ ಸಂಪುಟದ ಮುಂದಿರಿಸಿ, ಅನುಮೋದನೆ ಪಡೆದುಕೊಂಡ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಜಾರಕಿಹೊಳಿ ಅವರು ತಿಳಿಸಿದರು.

*ದೆಹಲಿ ಭೇಟಿ:* ಅಣೆಕಟ್ಟು ನಿರ್ಮಾಣಕ್ಕಾಗಿ ಈಗಾಗಲೆ 2019ರ ನವೆಂಬರ್ ಮತ್ತು ಕಳೆದ ಜುಲೈ 14ರಂದು ಕೇಂದ್ರದ ಜಲಶಕ್ತಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲಾಗಿದೆ. ಹಾಗೆಯೇ, ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದನ್ನು ಸ್ಮರಿಸಿದ ಸಚಿವರು, ಮುಂದಿನ ಬುಧವಾರ ಇಲ್ಲವೆ ಗುರುವಾರ (ಸೆ. 16/ 17) ಮತ್ತೊಮ್ಮೆ ಪರಿಸರ ಸಚಿವರನ್ನು ಭೇಟಿ ಮಾಡಿ ಯೋಜನೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

*ಕೇಂದ್ರಕ್ಕೆ ಒತ್ತಡ:* ಮೇಕೆದಾಟು ಜಲಾಶಯಕ್ಕೆ ಭೇಟಿನೀಡಿ ಪರಿಶೀಲಿಸಿದ ಬಳಿಕ ಮತ್ತಷ್ಟು ವಾಸ್ತವಾಂಶಗಳ ಸಹಿತ ದೆಹಲಿಗೆ ತೆರಳಿ ಕೇಂದ್ರದ ಪರಿಸರ ಸಚಿವರಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ, ಅಗತ್ಯ ಬಿದ್ದರೆ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ಹೇರಿ ಶೀಘ್ರ ಅನುಮೋದನೆಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಹೋಗುವ ಬಗ್ಗೆಯೂ ಚಿಂತನೆ ನಡೆಸಿರುವುದಾಗಿ ತಿಳಿಸಿದರು.

*ಕುಡಿಯುವ ನೀರಿನ ಯೋಜನೆ:* ವ್ಯರ್ಥವಾಗಿ ಹರಿದುಹೋಗುತ್ತಿದ್ದ ಕಾವೇರಿ ನದಿ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿ ಅಣೆಕಟ್ಟು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಸಮಗ್ರ ಕುಡಿಯುವ ನೀರಿನ ಯೋಜನೆಗಾಗಿ ಅರ್ಕಾವತಿ ಮತ್ತು ಕಾವೇರಿ ನದಿಯ ಸಂಗಮದ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಸಮತೋಲನ ಜಲಾಶಯವನ್ನು ನಿರ್ಮಿಸಲಾಗುತ್ತಿದೆ. ಭವಿಷ್ಯದಲ್ಲಿ ಬೆಂಗಳೂರು ನಗರಕ್ಕೆ ಇಲ್ಲಿಂದ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದರು.

*ತಮಿಳುನಾಡಿಗೂ ನೀರು:* ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಸಾಮಾನ್ಯ ಮಳೆ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಮಾಸಿಕವಾಗಿ ಹರಿಸಲಾಗುವುದು. ಅದೇ ರೀತಿ ಬೆಂಗಳೂರಿಗೆ ಹಂಚಿಕೆಯಾಗಿರುವ 4.75 ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲಾಗುವುದು ಎಂದು ಜಾರಕಿಹೊಳಿ ಅವರು ಮಾಹಿತಿ ನೀಡಿದರು.

*ಯೋಜನಾ ಸ್ಥಳ:* ಮುಗ್ಗೂರು ಮತ್ತು ಹನೂರು ಅರಣ್ಯ ವಲಯದ ನಡುವಿನ ಒಂಟಿ ಗುಂಡ್ಲು ಬಳಿ ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಸುಮಾರು 441.20 ಮೀಟರ್ ಎತ್ತರ ಹಾಗೂ ಸರಿಸುಮಾರು 674.5 ಮೀಟರ್ ನಷ್ಟು ಅಗಲವಿರುವ ಈ ಉದ್ದೇಶಿತ ಅಣೆಕಟ್ಟೆಯಲ್ಲಿ 67.16 ಟಿಎಂಸಿ ನೀರನ್ನು ಶೇಖರಿಸಿಟ್ಡುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. 17 ಕ್ರಸ್ಟ್ ಗೇಟ್ ಹೊಂದಿರುವ ಜಲಾಶಯದಲ್ಲಿ 7.7 ಟಿಎಂಸಿಯಷ್ಟು ನೀರು ಡೆಡ್ ಸ್ಟೊರೇಜ್ ನಲ್ಲಿ ಸಂಗ್ರಹವಾಗಿರುತ್ತದೆ.

*ವಿದ್ಯುತ್ ಘಟಕ:* ಒಂಟಿಗುಂಡ್ಲುವಿನಿಂದ 3.5. ಕಿ.ಮೀ ದೂರದಲ್ಲಿ ತಮಿಳುನಾಡಿಗೆ ಬಿಡುವ ನೀರಿನಿಂದ ಸುಮಾರು 400 ಮೆಗಾ ವಾಟ್ ವಿದ್ಯುತ್ ಉತ್ಪಾದಿಸುವ ಉದ್ದೇಶವಿದೆ. ಇಂಧನ ಇಲಾಖೆಯ ವತಿಯಿಂದ ಇಲ್ಲಿ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಯೋಜನೆಯ ರೂಪುರೇಷೆಗಳನ್ನು ವಿವರಿಸಿದರು.

*ನ್ಯಾಯಾಲಯದಲ್ಲಿ ಪ್ರಕರಣ:* ಪ್ರಸ್ತಾಪಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ ನೀಡಿದ ಅನುಮತಿಯಂತೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಯನ್ನು ತಡೆಹಿಡಿಯುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತ್ಯುತ್ತರ ಸಲ್ಲಿಸಿರುತ್ತವೆ. ಪ್ರಕರಣವು ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಇರುವುದಾಗಿ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಇಂಜಿನಿಯರ್ ಶಂಕ್ರರೇಗೌಡ, ಸೂಪರಿಂಟೆಂಡ್ ಇಂಜಿನಿಯರ್ ವಿಜಯ್ ಕುಮಾರ್, ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ವಂಕಟೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.


Spread the love

About Yuva Bharatha

Check Also

ಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಕೆ.!

Spread the loveಬೋರಗಾಂವ ಪಟ್ಟಣದ ಶ್ರೀ ಅರಿಹಂತ ಕೋ,ಆಪ್ ಸೌಹಾರ್ಧ ಸಹಕಾರಿ ಬ್ಯಾಂಕ ವಿರುದ್ಧ ರೈತರ ಪ್ರತಿಭಟನೆ ಬ್ಯಾಂಕ ವ್ಯವಸ್ಥಾಪಕರಿಗೆ …

Leave a Reply

Your email address will not be published. Required fields are marked *

6 + 15 =