Breaking News

ಅಥಣಿಯಲ್ಲಿ ಸಂಚಲನ ಮೂಡಿಸಿದ ರಮೇಶ ಜಾರಕಿಹೊಳಿ

Spread the love

ಅಥಣಿಯಲ್ಲಿ ಸಂಚಲನ ಮೂಡಿಸಿದ ರಮೇಶ ಜಾರಕಿಹೊಳಿ

ಯುವ ಭಾರತ ಸುದ್ದಿ ಅಥಣಿ :
ಪಕ್ಷದ ಗೆಲುವನ್ನು ತಮ್ಮ ಗೆಲುವೆಂದುಕೊಂಡು ಪ್ರಚಾರಗಿಟ್ಟಿಸಿಕೊಂಡರು. ಇಂತಹ ಮನಸ್ಥಿತಿ ವ್ಯಕ್ತಿ ಕಾಂಗ್ರೆಸ್‌ ಪಕ್ಷ ಸೇರಿರುವುದರಿಂದ ಪೀಡೆ ತೊಲಗಿ, ನಮ್ಮ ದಾರಿ ಸುಗಮವಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಲೇವಡಿ ಮಾಡಿದರು.

ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಬಿಜೆಪಿ ಅಥಣಿ ಮಂಡಲ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಉಪಚುನಾವಣೆಯಲ್ಲಿ ಲಕ್ಷ್ಮಣ ಸವದಿ ಒಲ್ಲದ ಮನಸ್ಸಿನಿಂದ ಮಹೇಶ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ ಪರವಾಗಿ ಪಕ್ಷದ ನಾಯಕರ ಸೂಚನೆಯ ಮೇರೆಗೆ ಕೆಲಸ ಮಾಡಿದ್ದರು.

ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಮತ್ತು ಡಿಕೆಶಿ ಮೈತ್ರಿ ಆಗಿದೆ. ಅಂದಿನಿಂದ ಕುತಂತ್ರ ರಾಜಕಾರಣ ಮಾಡುತ್ತಲೇ ಇದ್ದರು. ಕಪಟ ಮನಸಿನ ಸವದಿ ಬಿಜೆಪಿಯಿಂದ ಹೊರಗೆ ಹೋಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು. ಕಳೆದ 5 ವರ್ಷಗಳಲ್ಲಿ ಶಾಸಕ ಮಹೇಶ ಕುಮಟಳ್ಳಿ ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ .2,741 ಕೋಟಿಗಳ ಅನುದಾನ ತರುವ ಮೂಲಕ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರ ಬಹು ದಿನಗಳ ಕನಸಿನ ಯೋಜನೆಯಾದ .1,486 ಕೋಟಿ ವೆಚ್ಚದ ಅಮ್ಮಾಜೇಶ್ವರಿ ಯಾತ ನೀರಾವರಿ ಯೋಜನೆ ಮಂಜೂರಾಗಿದ್ದು, ಮತಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸುಗಳನ್ನು ಹೊತ್ತಿರುವ ಅವರನ್ನು ಮತ್ತೊಮ್ಮೆ ತಾವೆಲ್ಲರೂ ಅತಮೂಲ್ಯವಾದ ಮತಗಳನ್ನು ನೀಡುವ ಮೂಲಕ ಗೆಲ್ಲಿಸಬೇಕು. ರಾಜ್ಯದಲ್ಲಿ ಮತ್ತೆ ಬಿಜೆಪಿ ಆಡಳಿತ ಅಧಿಕಾರಕ್ಕೆ ಬರಲಿದೆ. ಅದರಲ್ಲಿ ಮಹೇಶ ಕುಮಟಳ್ಳಿ ಖಂಡಿತ ಸಚಿವರಾಗುತ್ತಾರೆ ಎಂದು ಭರವಸೆ ನೀಡಿದರು. ಬೇಸಿಗೆಯ ಕಾಲದಲ್ಲಿ ಮತಕ್ಷೇತ್ರದ ಜನತೆಗೆ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಬಿಡಿಸಲಾಗುವುದು. ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ಕೊರತೆ ನಿಭಾಯಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ವಿದ್ಯುತ್‌ ಕಡಿತ ಮಾಡಿರುವ ವಿಷಯದ ಕುರಿತು ಶೀಘ್ರದಲ್ಲಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಹೆಚ್ಚಿನ ಸಮಯ ವಿದ್ಯುತ್‌ ಬಿಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಶಾಸಕ ಮಹೇಶ ಕುಮಟಳ್ಳಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಮುಖಂಡರು ನನಗೆ ಸ್ಪರ್ಧಿಸಲು ಟಿಕೆಟ್‌ ನೀಡುವ ಮೂಲಕ ಅವಕಾಶ ಕಲ್ಪಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಈ ಸಂದರ್ಭದಲ್ಲಿ ಅಭಿನಂದಸುತ್ತೇನೆ. 2018ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮೊದಲ ಬಾರಿಗೆ ಶಾಸಕನಾದೆ. ಅದರ ಹಿಂದಿನ ಶಕ್ತಿಯಾಗಿ ರಮೇಶಣ್ಣ ಜಾರಕಿಹೊಳಿ ಮಹತ್ವದ ಪಾತ್ರ ವಹಿಸಿದ್ದರು ಎಂದರು. 2019ರ ವೇಳೆಗೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ 17 ಜನ ಶಾಸಕರು ಒಟ್ಟಿಗೆ ಭಾರತೀಯ ಜನತಾ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಬಂದಿದ್ದೇವೆ.

ಪಕ್ಷದ ನಾಯಕರ ಮಾರ್ಗದರ್ಶನದಂತೆ ಪಕ್ಷ ಸಂಘಟನೆಯ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಮತಕ್ಷೇತ್ರಕ್ಕೆ ಅನುದಾನ ತರುವಲ್ಲಿ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳುವಲ್ಲಿ ನನಗೂ ಕೂಡ ಅನೇಕ ಅವಮಾನದ ಪ್ರಸಂಗಗಳು ಜರುಗಿವೆ. ಮತಕ್ಷೇತ್ರದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಪಕ್ಷದ ನಾಯಕರು ಹಾಗೂ ರಮೇಶಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಮತಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ರಮೇಶಣ್ಣ ಜಾರಕಿಹೊಳಿ ಅವರ ಪ್ರಯತ್ನದಿಂದ ನೀರಾವರಿ ಯೋಜನೆಗಳಾಗಿವೆ ಎಂದು ತಿಳಿಸಿದರು. ಕೃಷ್ಣಾ ನದಿ ತೀರದಲ್ಲಿ ಕೇವಲ 2 ತಾಸು ವಿದ್ಯುತ್‌ ಪೂರೈಕೆ ಮಾಡಲಾಗುತ್ತಿದ್ದು, ಇದರಿಂದ ರೈತರ ಅನೇಕ ಬೆಳೆಗಳು ಒಣಗುತ್ತಿವೆ.

ಜಿಲ್ಲಾಧಿಕಾರಿಗಳು ಕೂಡಲೇ ವಿದ್ಯುತ್‌ ಪೂರೈಕೆಯ ಅವಧಿಯನ್ನು ಹೆಚ್ಚಿಸಬೇಕು. ಸಾವಿರಾರು ಎಕರೆ ಕಬ್ಬು ಬೆಳೆಗಾರರ ಬದುಕಿನ ಪ್ರಶ್ನೆಯಾಗಿದೆ. ರೈತರು ರೊಚ್ಚಿಗೆದ್ದು ಹೋರಾಟ ನಡೆಸುವ ಮುನ್ನ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರೆ ರೈತರೊಂದಿಗೆ ಉಗ್ರ ಹೋರಾಟ ಕೈಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಡಳಿತವನ್ನು ಎಚ್ಚರಿಸಿದರು.

ಕೊಕಟನೂರು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಲಕ್ಷ್ಮಣ ಸವದಿ ನನ್ನ ಆತ್ಮೀಯ ಗೆಳೆಯ. ಅವರ ರಾಜಕೀಯ ಬೆಳವಣಿಗೆಯಲ್ಲಿ ನನ್ನ ಪಾತ್ರ ಬಹಳ ಮುಖ್ಯವಾಗಿದೆ. ಅವರನ್ನು ಶಾಸಕರನ್ನಾಗಿ ಮಾಡಿದವರು ನಾವು. ಭಾರತೀಯ ಜನತಾ ಪಕ್ಷದಲ್ಲಿ ಶಾಸಕರಾಗಿ, ಸಚಿವನಾಗಿ, ಅಷ್ಟೆಅಲ್ಲ ರಾಜ್ಯದ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ ಭಾರತೀಯ ಜನತಾ ಪಕ್ಷವನ್ನು ಬಿಡಬಾರದಾಗಿತ್ತು.

ಅವರು ಇಂದು ಪಕ್ಷವನ್ನು ತೊರೆದು ಬೇರೆ ಪಕ್ಷಕ್ಕೆ ಹೋಗಿದ್ದರೂ ನಾವು ನೀವೆಲ್ಲರೂ ಸೇರಿಕೊಂಡು ಬಿಜೆಪಿ ಸರ್ಕಾರದ ಸಾಧನೆಯನ್ನು ಮತದಾರರ ಮುಂದೆ ತರುವ ಮೂಲಕ ಮಹೇಶ ಕುಮಟಳ್ಳಿ ಅವರನ್ನು ಮತ್ತೊಮ್ಮೆ ಗೆಲ್ಲಿಸಿ ಕೊಡಬೇಕಾಗಿದೆ. ಬರುವ 17 ರಂದು ನಾಮಪತ್ರ ಸಲ್ಲಿಸುವ ವೇಳೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು. ಮುಖಂಡರಾದ ಮಹಾರಾಷ್ಟ್ರದ ಮಾಜಿ ಶಾಸಕ ಸುರೇಶ ಹರವಡಿಕರ ಮಾತನಾಡಿ, ಭಾರತೀಯ ಜನತಾ ಪಕ್ಷದ ಸಾಧನೆ ಹಾಗೂ ಅಥಣಿ ಮತಕ್ಷೇತ್ರದಲ್ಲಿ ಮಹೇಶ ಕುಮಟಳ್ಳಿ ಅವರ ಸಾಧನೆಯನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ಹೋಗೋಣ. ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಸಿದ್ದಪ್ಪ ಮುದಕಣ್ಣವರ, ನ್ಯಾಯವಾದಿ ಕೆ.ಕುಂದರಗಿ, ಅನಿಲರಾವ ದೇಶಪಾಂಡೆ, ಡಾ.ರೂಢಗಿ, ಅನಿಲ ಸೌದಾಗರ, ದೀಪಕ ಪಾಟೀಲ, ಪ್ರಭಾಕರ ಚವ್ಹಾಣ, ನಿಂಗಪ್ಪ ನಂದೇಶ್ವರ, ನ್ಯಾಯವಾದಿ ಪಾಟೀಲ, ಅಮೂಲ ನಾಯಿಕ, ಮಲ್ಲಪ್ಪ ಹಂಚಿನಾಳ, ಸಿದ್ದು ಹಂಡಗಿ, ಪುಟ್ಟು ಹಿರೇಮಠ, ಶಿವಾನಂದ ಸಿಂಧೂರ ಇನ್ನಿತರರು ಉಪಸ್ಥಿತರಿದ್ದರು.

ಲಕ್ಷ್ಮಣ ಸವದಿ ಸಾಕಷ್ಟುದುಡ್ಡು ಇರುವ ಸಾಹುಕಾರ, ದುಡ್ಡು ಹಂಚಿ ಮತ ಕೇಳಬಹುದು, ನೀವೆಲ್ಲರೂ ಗಟ್ಟಿಯಾಗಿ ನೀವು ಯಾವುದೇ ಆಸೆ ಹಾಗೂ ಒತ್ತಡಕ್ಕೆ ಒಳಗಾಗದೇ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರನ್ನು ಬೆಂಬಲಿಸಬೇಕು. ಪಿಕೆಪಿಎಸ್‌ ಸಿಬ್ಬಂದಿ ಹಾಗೂ ಶೇರು ಹೊಂದಿದ ಸದಸ್ಯರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಬಾರದು. ಒಂದು ವೇಳೆ ಒತ್ತಡಕ್ಕೆ ಒಳಗಾದರೇ ಮುಂಬರುವ ದಿನಗಳಲ್ಲಿ ಅಡಿಟ್‌ ಮಾಡಿಸುವ ಅನಿವಾರ್ಯತೆ ಎದುರಾಗಲಿದೆ.
-ರಮೇಶ ಜಾರಕಿಹೊಳಿ, ಮಾಜಿ ಸಚಿವರು.

 

ಮತಕ್ಷೇತ್ರದಲ್ಲಿ ಅನೇಕ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ .2741.41 ಕೋಟಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇನ್ನುಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕನಸಿದೆ. 2023ರ ಈ ಚುನಾವಣೆಯಲ್ಲಿ ನಿಮ್ಮೆಲ್ಲರ ಅತ್ಯ ಅಮೂಲ್ಯವಾದ ಮತಗಳನ್ನು ನೀಡುವ ಮೂಲಕ ಮತ್ತೊಮ್ಮೆ ಗೆಲ್ಲಿಸಬೇಕು. ಈ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದ್ದು, ದಯಮಾಡಿ ಎಲ್ಲರೂ ತಮ್ಮ ಮತವನ್ನು ನೀಡುವ ಮೂಲಕ ನನ್ನನ್ನು ಗೆಲ್ಲಿಸಬೇಕು.
-ಮಹೇಶ ಕುಮಟಳ್ಳಿ, ಶಾಸಕರು.


Spread the love

About Yuva Bharatha

Check Also

ಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ

Spread the loveಪ್ರಮೋದ್ ಮುತಾಲಿಕ್ ನಿವೃತ್ತಿ, ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷರಾಗಿ ಸಿದ್ದಲಿಂಗ ಸ್ವಾಮಿ ಆಯ್ಕೆ ಬೆಂಗಳೂರು : ಶ್ರೀ …

Leave a Reply

Your email address will not be published. Required fields are marked *

17 + ten =