9 ರಿಂದ ಸಾವಳಗಿ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾ ಜಾತ್ರೆ
ಯುವ ಭಾರತ ಸುದ್ದಿ ಸಾವಳಗಿ :
ಘಟಪ್ರಭಾ ತೀರದ ಇತಿಹಾಸ ಪ್ರಸಿದ್ದ ಪರಮ ಜಾಗ್ರತ ಸ್ಥಾನವು ಆದ ಗೋಕಾಕ ತಾಲೂಕಿನ ಪುಣ್ಯಕ್ಷೇತ್ರ ಸಾವಳಗಿಯ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಸಿದ್ಧ ಸಂಸ್ಥಾನ ಪೀಠವು ಸುಮಾರು 7೦೦ ವರ್ಷಗಳಿಂದಲೂ ಹಿಂದೂ-ಮುಸ್ಲಿಂ ಧರ್ಮ ಸಮನ್ವಯದ ಗೌರವವನ್ನು ಹೊಂದಿ ತನ್ನದೇ ಆದ ಭವ್ಯ ಪರಂಪರೆಯಿಂದ ಕಂಗೊಳಿಸುತ್ತಿದೆ. ಈ ಪರಮಪಾವನ ಕ್ಷೇತ್ರದ ಪರಂಪರಾಗತ ವರ್ಷಗಳಂತೆ ಈ ಸಲವೂ ಏ.9-18 ರ ವರೆಗೆ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾ ಜಾತ್ರೆ ಹಾಗೂ ಜಾನುವಾರುಗಳ ಜಾತ್ರೆ ಜರುಗಲಿದೆ.
ಶೂನ್ಯ ಸಿಂಹಾಸನಾಧೀಶ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿಯಲ್ಲಿ ಏ.9 ರಂದು ಜಾತ್ರೆ ಆರಂಭವಾಗುವುದು. 9 ರಿಂದ ರಾತ್ರಿ 8.30 ಗಂಟೆಗೆ ಸಕಲ ರಾಜಮರ್ಯಾದೆಯೊಡನೆ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮೂರ್ತಿಯ ಪುಷ್ಪಾಂದೋಲನ ಮಹೋತ್ಸವದೊಂದಿಗೆ ಪಲ್ಲಕ್ಕಿ ಕಟ್ಟೆಗೆ ಮಹೂರ್ತ ಮಾಡುವುದು ಹಾಗೂ ಮದಾಲಸಿ, ಗೀಗೀ ಪದ, ಭಕ್ತಿ ಗೀತೆ, ಶಾಯಿರಿ ಗಾನಾ ಕಾರ್ಯಕ್ರಮಗಳು ಜರುಗುವವು.
ದಿನಾಂಕ: 10 ಸೋಮವಾರದಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಶ್ರೀ ಜಗದ್ಗುರು ಶ್ರೀ ಶಿವಲಿಂಗೇಶ್ವರರ ಸನ್ನಿಧಿಯಲ್ಲಿ ಸಹಸ್ರಾರು ಸದ್ಭಕ್ತರಿಂದ ಶ್ರೀ ವೀರಭದ್ರೇಶ್ವರ ದೇವರ ಕೊಂಡವನ್ನು ದಾಟುವುದು ಮತ್ತು ಸನ್ನಿಧಿಯವರಿಂದ ಆಶೀರ್ವಾದ ಪಡೆಯುವ ಕಾರ್ಯಕ್ರಮ ಜರುಗುವುದು. ಸಂಜೆ 7.30 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಜಾತ್ರಾ ಮಹೋತ್ಸವ ಉದ್ಘಾಟನೆಗೊಂಡು, ರಾತ್ರಿ 1೦.3೦ ಗಂಟೆಯ ವರೆಗೆ ಶಿವಕೀರ್ತನೆ, ವಿಧ್ವಜರ ಭಾಷಣ, ಅತಿಥಿಗಳ ಭಾಷಣ, ಭಕ್ತಿ ವಚನ ಗಾಯನ, ನಾಡಿನ ರೈತರ ಭಾಷಣ, ವಾಣಿಜ್ಯೋದ್ಯಮಿಗಳ ಭಾಷಣ ಜರಗುವುದು. ಸನಾತನ ಪರಂಪರೆಯಂತೆ ಶ್ರೀ ಜಗದ್ಗುರು ಶಿವಲಿಂಗೇಶ್ವರರು ಹಸಿರು ರಾಜಪೋಷಾಕಿನೊಡನೆ ಸಕಲ ರಾಜಮರ್ಯಾದೆ ಬಿರುದಾವಳಿಗಳಿಂದ ಅಲಂಕೃತರಾಗಿ ದರ್ಶನ ನೀಡುವರು.
ಪ್ರತಿದಿನ ಸನ್ನಿಧಿಯವರ ಆಶೀರ್ವಚನ ಜರುಗುವದು.
ದಿನಾಂಕ: 18 ಮಂಗಳವಾರ ಸಂಜೆ 4.30 ಗಂಟೆಯಿಂದ ಸಂಜೆ 7.3೦ ಗಂಟೆಯವರೆಗೆ ಅಡ್ಡ ಪಲ್ಲಕ್ಕಿ ಮಹೋತ್ಸವ ಜರುಗುವುದು. ನಂತರ ಹಸಿರು ರಾಜಪೋಷಾಕುಧಾರಿ ಶ್ರೀ ಸನ್ನಿಧಿಯವರಿಂದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶ ಮತ್ತು ಮಂಗಲಾಶೀರ್ವಾದ ಜರುಗುವುದು.
ಕುಸ್ತಿ, ಕೀರ್ತನೆ, ಜಾನುವಾರು ಜಾತ್ರೆ, ವಿದ್ವತ್ ಗೋಷ್ಠಿಗಳು, ಸಂಗೀತ, ನೃತ್ಯ ಹಾಗೂ ಗಣ್ಯರಿಗೆ ಗೌರವಾಶೀರ್ವಾದ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು, ಮಹಾಭಕ್ತಾದಿಗಳಿಗೆ ನಿರಂತರ ದಾಸೋಹ ವ್ಯವಸ್ತೆ ಇದೆ.
ಯಾತ್ರಿಕರಿಗೆ ಮಹಾಪ್ರಸಾದದೊಡನೆ ಹಾಗೂ ಜಾನುವಾರುಗಳಿಗೆ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಹಾಗೂ ಸಾಧ್ಯವಿದ್ದ ಇತರೆ ವ್ಯವಸ್ಥೆಗಳನ್ನು ಮಾಡಲಾಗುವುದು. ತಾಲೂಕು ಮತ್ತು ಜಿಲ್ಲೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಾತ್ರೆಗೆ ಬರುವ ಯಾತ್ರಿಕರಿಗೆ ಬೆಳಗಾವಿ, ವಿಜಯಪುರ, ಧಾರವಾಡ, ಹುಬ್ಬಳ್ಳಿ, ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ, ಹುಕ್ಕೇರಿ ರಾಯಬಾಗ, ಅಥಣಿ, ಮುಧೋಳ, ಜಮಖಂಡಿ, ಬಾಗಲಕೋಟೆ, ರಾಮದುರ್ಗ ಮತ್ತು ಕೊಲ್ಲಾಪುರ ಮುಂತಾದ ಕಡೆಗಳಿಂದ ಬಸ್ಸುಗಳ ವ್ಯವಸ್ಥೆ ಇದೆ. ಗೋಕಾಕ ರೇಲ್ವೆ ಸ್ಟೇಶನ್‌ದಿಂದ ಬಸ್ಸುಗಳ ವ್ಯವಸ್ಥೆ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.