ಹೆಬ್ಬಾಳಕರ ಪಾಲಿಗೆ ಶಾಲಾ ಮಕ್ಕಳೇ ಸ್ಟಾರ್ ಪ್ರಚಾರಕರು !
ಯುವ ಭಾರತ ಸುದ್ದಿ ಬೆಳಗಾವಿ :
ಬೆಳಗಾವಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಾಲಿಗೆ ಶಾಲಾ ಮಕ್ಕಳೇ ಈಗ ಸ್ಟಾರ್ ಪ್ರಚಾರಕರಾಗಿದ್ದಾರೆ. ಅವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮಕ್ಕಳನ್ನು ವ್ಯಾಪಕ ಪ್ರಮಾಣದಲ್ಲಿ ಬಳಸಿಕೊಂಡರೂ ಚುನಾವಣಾ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಬೆಳಗಾವಿ ತಾಲೂಕಿನ ಖನಗಾಂವ ಬಿ.ಕೆ. ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಮಕ್ಕಳು ಭಾಗವಹಿಸಿದ್ದಾರೆ. ಮಾತ್ರವಲ್ಲ ಮಕ್ಕಳು ಬೀದಿಬೀದಿಗಳಲ್ಲಿ ಹಾಗೂ ಮನೆ ಮನೆಗೆ ಸುತ್ತಾಡಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಓಡಾಡಿದ್ದಾರೆ. ಈ ಸಂದರ್ಭದಲ್ಲಿ ಸ್ವತಃ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದರೂ ಸಹ ಅವರು ಮಕ್ಕಳನ್ನು ಪ್ರಚಾರಕ್ಕೆ ಬರಬೇಡಿ ಎಂದಿಲ್ಲ.
ಒಟ್ಟಾರೆ, ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್ ಅಭ್ಯರ್ಥಿ ವ್ಯಾಪಕ ಪ್ರಮಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಬುಧವಾರ ಬೆಳಗ್ಗೆ ಕರಿಕಟ್ಟಿ ಗ್ರಾಮದಲ್ಲಿ ಸಹ ಶಾಲಾ ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಕರೆ ತಂದಿದ್ದರು.
ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ಅಲ್ಪ ಸ್ವಲ್ಪ ಹಣದ ಆಮಿಷವೊಡ್ಡಿ ಕರೆತರಲಾಗುತ್ತದೆ ಎನ್ನುವುದು ಗ್ರಾಮಸ್ಥರ ದೂರು. ಚುನಾವಣೆಗೂ ಮುನ್ನ ಈ ಭಾಗದ ಗ್ರಾಮಸ್ಥರಿಗೆ ವಿವಿಧ ಆಮಿಷಗಳನ್ನು ಹೆಬ್ಬಾಳ್ಕರ್ ವೊಡ್ಡಿದ್ದರು. ಈ ಸಂದರ್ಭದಲ್ಲಿ ಜನತೆ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಈ ಬಾರಿ ಅವರ ಚುನಾವಣಾ ಪ್ರಚಾರದಲ್ಲಿ ನಾಗರಿಕರು ಹೆಚ್ಚಾಗಿ ಭಾಗವಹಿಸುತ್ತಿಲ್ಲ. ಅನಿವಾರ್ಯವಾಗಿ ಮಕ್ಕಳನ್ನು ಕರೆ ತರುತ್ತಿದ್ದಾರೆ ಎನ್ನುವುದು ಜನರ ನೇರ ಆರೋಪವಾಗಿದೆ.