ಸುಳೇಭಾವಿಯಲ್ಲಿ ಸಂಭ್ರಮದ ಶ್ರೀ ಮಹಾರಾಣಿ ದೇವಿ ಜಾತ್ರೆ
ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾರಾಣಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ಪಲ್ಲಕ್ಕಿ ಉತ್ಸವದೊಂದಿಗೆ ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು.
ಗ್ರಾಮದ ಶ್ರೀ ಮಹಾರಾಣಿಯ ಪಲ್ಲಕ್ಕಿ ಉತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು. ಬೆಳಗ್ಗೆ 6 ಗಂಟೆಗೆ ಶ್ರೀ ಮಹಾರಾಣಿ ದೇವಿಗೆ ಅಭಿಷೇಕ, ವಿಶೇಷ ಅಲಂಕಾರ, ಆರತಿ ಬೆಳಗಿ, ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಗ್ರಾಮಸ್ಥರು ಸುಳೇಭಾವಿ ಗ್ರಾಮದ ಲಕ್ಷ್ಮೀ ಗಲ್ಲಿಯ ಶ್ರೀ ಯಲ್ಲಮ್ಮನ ದೇವಿಗೆ ಉಡಿ ತುಂಬಿ ನಂತರ ವಾದ್ಯ ಮೇಳದೊಂದಿಗೆ ಶ್ರೀ ಕಲ್ಮೇಶ್ವರ, ಶ್ರೀ ವೀರಭದ್ರೇಶ್ವರ, ಶ್ರೀ ಶಾಕಾಂಬರಿ, ಶ್ರೀ ಮಹಾಲಕ್ಷ್ಮೀ ದೇವಿ, ಶ್ರೀ ದುರ್ಗಾ ದೇವಿ, ಶ್ರೀ ಗಣಪತಿ, ವಿಠ್ಠಲ-ರುಕ್ಮಿಣಿ, ಶ್ರೀ ಹನುಮಾನ, ಶ್ರೀ ಬನಶಂಕರಿ, ಶ್ರೀ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ಮಹಾರಾಣಿ ದೇವಸ್ಥಾನಕ್ಕೆ ಆಗಮಿಸಿದರು. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಿಗೆ ಉಡಿ ತುಂಬಿದ ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮ ನೆರವೇರಿತು.
ಶ್ರೀ ಮಹಾರಾಣಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರಮನ್ ಶಿವಾಜಿ ಹುಂಕರಿಪಾಟೀಲ, ಬಸನಗೌಡ ಹುಂಕರಿಪಾಟೀಲ, ಅಣ್ಣಪ್ಪ ಪಾಟೀಲ, ಸದು ಲಖನಗೌಡ, ಲಕ್ಷ್ಮಣ ಮೋಳಗಿ, ಬಸವಂತ ನಿಂಗನಗೌಡ, ರಾಮ ಹುಂಕರಿಪಾಟೀಲ, ದೇವಪ್ಪ ನಿಂಗನಗೌಡ, ಮಾರುತಿ ಲಖನಗೌಡ, ನಾಗಪ್ಪ ನಗಾರಿಪಾಟೀಲ, ಅನಿಲ್ ನಿಂಗನಗೌಡ ಸೇರಿದಂತೆ ಇತರರು ಇದ್ದರು.