ಮೇದರ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರದ ಆದೇಶ: 8 ಸಮುದಾಯಗಳಿಗೆ ಅನುಕೂಲ
ಯುವ ಭಾರತ ಸುದ್ದಿ ಬೆಂಗಳೂರು:
ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ಅತ್ಯಂತ ಹಿಂದುಳಿದ ಸಮುದಾಯವಾಗಿರುವ ಮೇದರ , ಬಟ್ಟರ್, ಗೌರಿ, ಗೌರಿ ಮರಾಠ, ಗೌರಿಗ, ಮೇದರಿ, ಬುರುಡ್ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಮೇದರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ-1 ಷಾಹೀನ್ ಪರ್ವೀನ್ ಕೆ. ಈ ಆದೇಶ ಹೊರಡಿಸಿದ್ದಾರೆ.
ಇದು ಬುಟ್ಟಿ ನೇಯುವ ಕಾರ್ಯ ಮಾಡುವ ಸಮುದಾಯಕ್ಕೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಶ್ರೀ ನಾರಾಯಣ ಗುರು ನಿಗಮ, ಗಾಣೀಗ ಅಭಿವೃದ್ಧಿ ನಿಗಮ ಮತ್ತು ಹಡಪದ ಅಭಿವೃದ್ಧಿ ನಿಮಗ ಸ್ಥಾಪನೆ ಬೆನ್ನಲ್ಲೇ ಮೇದರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಲಾಗಿದೆ.
ಮೇದರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಆದೇಶದಲ್ಲಿನ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 1ರ ಕ್ರಮ ಸಂಖ್ಯೆ: 36 (ಎ)ಯಿಂದ (ಜೆ) ವರೆಗೆ ಬರುವ ಮೇದರ, ಬಟ್ಟರ್, ಬರ್ನೆಡ್, ಗೌರಿಗ, ಗೌರಿ, ಗೌರಿ ಮರಾಠ, ಮೇದರಿ, ಬುರುಡ್ ಜಾತಿಗಳಿಗೆ ಶೈಕ್ಷಣಿಕ ಮತ್ತು ಔದ್ಯೋಗಿಕ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಫೆಬ್ರವರಿ 20ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗಾಣಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಹೊಸ ನಿಗಮವನ್ನು ಸ್ಥಾಪಿಸಲು ಹಾಗೂ ಈಡಿಗ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರೀನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸೋಮವಾರ (ಫೆಬ್ರುವರಿ 21) ರಂದು ಮೇದರ ಅಭಿವೃದ್ಧಿ ನಿಗಮ ಹಾಗೂ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಲಾಗಿದೆ.