Breaking News

ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ; ಯಕ್ಷಗಾನ ಕಲೆಯ ಸಮಗ್ರ ಹಿತಚಿಂತನೆಗೆ ವೇದಿಕೆಯಾಗಲಿ

Spread the love

ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ;
ಯಕ್ಷಗಾನ ಕಲೆಯ ಸಮಗ್ರ ಹಿತಚಿಂತನೆಗೆ ವೇದಿಕೆಯಾಗಲಿ

ಫೆಬ್ರವರಿ ೧೧ -೧೨ ರಂದು ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನವೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿದ್ದು , ಹಿರಿಯ ಕಲಾವಿದ , ಕಲಾಚಿಂತಕ ಡಾ. ಪ್ರಭಾಕರ ಜೋಶಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಅವರಿಗೆ, ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತ, ಸಮ್ಮೇಳನದ ಹಿನ್ನೆಲೆಯಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳಬಯಸುತ್ತಿದ್ದೇನೆ.

ಯಕ್ಷಗಾನ ಕಲೆ ಒಂದು ರೀತಿಯಲ್ಲಿ ಸಂಕ್ರಮಣ ಕಾಲದಲ್ಲಿದೆ . ಸಂದಿಗ್ಧ ಸ್ಥಿತಿಯಲ್ಲಿಯೂ ಇದೆ. ಏಕೆಂದರೆ ಈ ನಮ್ಮ ಪ್ರೀತಿಯ , ನಾವು ಆರಾಧಿಸುತ್ತ ಬಂದ ಕಲೆ ಕೆಲವೊಂದು ಕಾರಣಗಳಿಂದಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುವ ಅಪಾಯದ ಸೂಚನೆ ಕಂಡುಬರುತ್ತಿದೆಯೆಂಬ ಭಯ ಕೆಲವರಲ್ಲಾದರೂ ಇದ್ದೇಇದೆ. ಆಗಾಗ ಅಂತಹ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಈ ದೃಷ್ಟಿಯಿಂದ ನಾವು ಈಗ ನಡೆಯಲಿರುವ ಸಮ್ಮೇಳನವನ್ನು ಸ್ವಾಗತಿಸುತ್ತ ಅದು ಯಕ್ಷಗಾನ ಕಲೆಯ ಸಮಗ್ರ ಹಿತಚಿಂತನೆಗೆ ಒಂದು ವೇದಿಕೆಯಾಗಿ ಪರಿಣಮಿಸುತ್ತದೆಂಬ ಆಶಾಭಾವನೆಯನ್ನು ಇರಿಸಿಕೊಳ್ಳಬೇಕಾಗಿದೆ. ಕಲೆಯನ್ನು ಪರಿಶುದ್ಧ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕಾದ ದಿಸೆಯಲ್ಲಿ ಕಲಾಚಿಂತಕರಿಂದ ಯಾವ ಯಾವ ವಿಚಾರಗಳು ಈ ವೇದಿಕೆಯಲ್ಲಿ ಹೊರಬರಲಿವೆ ಹಾಗೂ ಆ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದೆ ಯಾರು ಯಾರು ಏನೇನು ಮಾಡಬೇಕೆಂಬ ಒಂದು ಸ್ಪಷ್ಟ ಚಿತ್ರಣ ಹೊರಹೊಮ್ಮುತ್ತದೆಂದು / ಹೊರಹೊಮ್ಮುವಂತಾಗಬೇಕೆಂದು ಆ ಕಲೆಯ ಬೆಳವಣಿಗೆ/ ಹಿತ ಬಯಸುವ ಜನರು ಆಶಿಸುವದು ಸಹಜ.

ಈಗಾಗಲೇ ಸಮ್ಮೇಳನದ ನಿಯೋಜಿತ ಅಧ್ಯಕ್ಷರು “ಅಭಿಮಾನ/ ಅಭಿಜ್ಞಾನ/ ಅಭಿಯಾನ” ಎಂಬ ತ್ರಿ-ಸೂತ್ರಗಳ ಆಧಾರದ ಮೇಲೆ ಸಮ್ಮೇಳನ ನಡೆಯುವದೆಂಬ ಸೂಚನೆ ನೀಡಿದ್ದಾರೆ. ಯಕ್ಷಗಾನ ಕಲಾ ಪ್ರದರ್ಶನಗಳ ದೃಷ್ಟಿಯಿಂದ ಹಲವು ಘಟಕಗಳಿದ್ದು ನಾವು ಅದರಲ್ಲಿ ಹಲವು ವಿಭಾಗಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
* ಕಲಾವಿದರು ( ಹಿಮ್ಮೇಳ- ಮುಮ್ಮೇಳ), ತಾಳಮದ್ದಳೆ ಅರ್ಥಧಾರಿಗಳ ಸಹಿತ.
* ಪ್ರಸಂಗಕರ್ತರು
* ಮೇಳಗಳ ಒಡೆಯರು
* ಕಲಾವಿಮರ್ಶಕರು
* ಪ್ರೇಕ್ಷಕರು ( ಅಭಿಮಾನಿಗಳು)
* ಕಲಾ ತಜ್ಞರು/ ಚಿಂತಕರು ಇತ್ಯಾದಿ.

ಪ್ರಸ್ತುತ ಯಕ್ಷಗಾನ ಸಮ್ಮೇಳನ ಎಲ್ಲ ತಿಟ್ಟುಮಟ್ಟುಗಳ, ಎಲ್ಲ ಪ್ರದೇಶಗಳ, ಎಲ್ಲ ಪ್ರಕಾರಗಳ, ಮೇಲೆ ಹೇಳಿದವರೆಲ್ಲರನ್ನೂ ಒಳಗೊಂಡು ವ್ಯಾಪಕ ಸ್ವರೂಪದಲ್ಲಿ ನಡೆಯಲಿದೆ ಎನ್ನುವದು ಸದ್ಯದ ನಮ್ಮ ಊಹೆ. ಇಲ್ಲಿ ಮುಖ್ಯವಾಗಿ ಯಕ್ಷಗಾನ ಕಲೆಯ ಸದ್ಯದ ಸ್ಥಿತಿಗತಿ/ ಸ್ವರೂಪ, ಅದರಲ್ಲಿ ಆಗಬೇಕಾದ ಸುಧಾರಣೆ, ಸಂಬಂಧಿಸಿದ ಎಲ್ಲರ ಜವಾಬ್ದಾರಿ/ ಕರ್ತವ್ಯ, ಮುಂದೇನು ಮಾಡಬೇಕೆಂಬ ನಿರ್ಣಯಗಳ ಬಗ್ಗೆ ಗಂಭೀರವಾದ ಚರ್ಚೆ, ಪ್ರಬಂಧ ಮಂಡನೆ, ಪ್ರಾತ್ಯಕ್ಷಿಕೆ, ಪ್ರಯೋಗ, ಇವೆಲ್ಲ ನಡೆಯಬಹುದಾಗಿದೆ. ಇವೆಲ್ಲ ದಾಖಲಿಸಲ್ಪಟ್ಟು ಮುಂದೆ ಗ್ರಂಥ ರೂಪದಲ್ಲಿಯೂ ಹೊರ ಬರುತ್ತದೆಂಬ ವಿಶ್ವಾಸವಿದೆ. ಬರಲೂಬೇಕು. ವಿಶೇಷವಾಗಿ ಕಲಾಹಿತೈಷಿಗಳಲ್ಲಿ ಇರುವ ಕೆಲವು ಆತಂಕಗಳನ್ನು ನಿವಾರಿಸುವ ದಿಸೆಯಲ್ಲಿ ಏನು ಮಾಡಬೇಕೆಂಬ ಬಗ್ಗೆ ಯೋಚಿಸಬೇಕಾದ ಅಗತ್ಯವಿದೆ. ಯಕ್ಷಗಾನೀಯವಲ್ಲದ ಹಲವು ಅಂಶಗಳು ಈ ಕಲೆಯಲ್ಲಿ ಸೇರಿಕೊಳ್ಳುತ್ತಿರುವದು, ಹೊಸ ಕಲಾವಿದರಲ್ಲಿ ಅಭ್ಯಾಸ ಪ್ರವೃತ್ತಿ ಇಲ್ಲದಿರುವದು ಮತ್ತು ಕೇವಲ ಅವರ ಅಭಿಮಾನಿಗಳ ಚಪ್ಪಾಳೆಯಿಂದ ಹೆಸರು ಪಡೆಯುವದು, ಕಲೆಯ ಬಗ್ಗೆ ಸರಿಯಾಗಿ ಅರಿಯದವರು ಮನಸ್ಸಿಗೆ ಬಂದಂತೆ ಕಲೆಯ ಬಗ್ಗೆ ಲೇಖನ , ವಿಮರ್ಶೆ ಬರೆದು ಎಲ್ಲರನ್ನೂ ಕಲಾಸಾರ್ವಭೌಮರೆಂದು ಬಣ್ಣಿಸುವದು , ವೇಷಭೂಷಣದ ಹೊರತಾಗಿ ಬೇರೆ ಯಾವ ಅಂಶವೂ ಯಕ್ಷಗಾನೀಯವಲ್ಲದಿರುವದು, ರಂಗದಲ್ಲಿ ಭಾವಗೀತೆ ಜಾನಪದ ಹಾಡು, ಭರತನಾಟ್ಯ, ಸಿನಿಮಾ ತರಹದ ಪ್ರೇಮಚೇಷ್ಟೆಗಳು , ಅಸಹ್ಯ ಹಾಸ್ಯ ಸನ್ನಿವೇಶಗಳು, ಯಕ್ಷಗಾನಕ್ಕೆ ಒಗ್ಗದ ಆಧುನಿಕ ಪ್ರಸಂಗಗಳು, ಹಲವು ಬಗೆಯ ಡೊಂಬರಾಟಗಳು ಏನೆಲ್ಲ ಸೇರಿಸಿ ಪ್ರೇಕ್ಷಕರನ್ನು ರಂಜಿಸಲು ಪ್ರಯತ್ನಿಸುವದು ಎಷ್ಟರಮಟ್ಟಿಗೆ ಈ ಕಲೆಯ ಹಿತದ ದೃಷ್ಟಿಯಿಂದ ಸ್ವೀಕಾರಾರ್ಹ ಮತ್ತು ಈ ಅನಿಷ್ಟಗಳನ್ನೆಲ್ಲ ಹೋಗಲಾಡಿಸಲು ನಾವೇನು ಮಾಡಬೇಕು ಎನ್ನುವದಕ್ಕೆಲ್ಲ ಈ ಸಮ್ಮೇಳನದಲ್ಲಿ ಉತ್ತರ ಕಂಡುಕೊಳ್ಳದೇ ಇದ್ದಲ್ಲಿ ಸಮ್ಮೇಳನ ಮಾಡಿ ಏನೂ ಪ್ರಯೋಜನವಿಲ್ಲ ಎಂಬುದು ಹಲವರ ಅಭಿಪ್ರಾಯ. ಅದನ್ನು ಈ ಸಮ್ಮೇಳನದ ಎರಡು ದಿವಸಗಳ ಕಾರ್ಯಕ್ರಮಗಳನ್ನು ರೂಪಿಸುವವರು ಗಮನದಲ್ಲಿಟ್ಟುಕೊಳ್ಳುತ್ತಾರೆಂಬ ಭರವಸೆಯನ್ನು ಈಗಿನ ಮಟ್ಟಿಗೆ ನಾವು ಇರಿಸಿಕೊಳ್ಳಬೇಕಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಕಷ್ಟು ಜನ ಕಲಾತಜ್ಞರಿದ್ದಾರೆ. ಹಿರಿಯ ಕಲಾವಿದರುಗಳಿದ್ದಾರೆ. ಕಲಾವಿಮರ್ಶಕರಿದ್ದಾರೆ. ಉತ್ತಮ ಪ್ರೇಕ್ಷಕ ಪ್ರಜ್ಞೆ ಉಳ್ಳವರೂ ಇದ್ದಾರೆ. ಎಲ್ಲರನ್ನೂ ಒಳಗೊಂಡು ಹೆಚ್ಚಿನ ಅಪಸ್ವರ ಬರದಂತೆ ಸಮ್ಮೇಳನ ನಡೆಯಲಿ ಎನ್ನುವುದು ನಮ್ಮಂಥವರ ಆಶಯ. ಎಲ್ಲರ ಎಲ್ಲ ಬಗೆಯ ವಿಚಾರಗಳಿಗೂ ವೇದಿಕೆ ಮುಕ್ತ ಅವಕಾಶ ಒದಗಿಸಲಿ. ಸಮ್ಮೇಳನ ಯಶಸ್ವಿಯಾಗಲಿ.

– ಎಲ್. ಎಸ್. ಶಾಸ್ತ್ರಿ


Spread the love

About Yuva Bharatha

Check Also

ವಿಧಾನಸಭಾ ಚುನಾವಣೆ: ಕಾರ್ಕಳದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಪ್ರಮೋದ ಮುತಾಲಿಕ್ !

Spread the loveವಿಧಾನಸಭಾ ಚುನಾವಣೆ: ಕಾರ್ಕಳದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಪ್ರಮೋದ ಮುತಾಲಿಕ್ ! ಯುವ ಭಾರತ ಸುದ್ದಿ ಕಾರ್ಕಳ: …

Leave a Reply

Your email address will not be published. Required fields are marked *

16 − nine =